

ಪೋರ್ಟ್ ಲೂಯಿಸ್ (ಮಾರಿಷಸ್): ಪರಿಸರಸ್ನೇಹಿ ಶುದ್ಧ ಇಂಧನದತ್ತ ಸಾಗುವ ಉದ್ದೇಶದಿಂದ ಸೌರ ಸಹಕಾರವನ್ನು ಇನ್ನಷ್ಟು ಮುಂದಕ್ಕೊಯ್ಯುವ ಸಲುವಾಗಿ ಮಾರಿಷಸ್ ಗಣರಾಜ್ಯ ಮತ್ತು ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ (ಐಎಸ್‌ಎ) ಗುರುವಾರ 'ರಾಷ್ಟ್ರ ಪಾಲುದಾರಿಕೆ ಚೌಕಟ್ಟು' (ಸಿಪಿಎಫ್) ದಾಖಲೆಪತ್ರಕ್ಕೆ ಸಹಿ ಹಾಕಿದವು. ಮಾರಿಷಸ್, ಐಎಸ್‌ಎಯ ಸಿಪಿಎಫ್‌ಗೆ ಸಹಿ ಹಾಕಿದ ನಾಲ್ಕನೇ ದೇಶವಾಗಿದೆ. ಬಾಂಗ್ಲಾದೇಶ, ಭೂತಾನ್ ಮತ್ತು ಕ್ಯೂಬಾ
ಇತರ ಮೂರು ದೇಶಗಳಾಗಿವೆ.
ಸೋಲಾರ್ ಟೆಕ್ನಾಲಜಿ ಅಪ್ಲಿಕೇಶನ್ ರಿಸೋರ್ಸ್ ಸೆಂಟರ್ (ಸ್ಟಾರ್‌ಸಿ) ಸ್ಥಾಪನೆ ಸಹಿತ ಮಾರಿಷಸ್‌ನ ಹಣಕಾಸು ಅಗತ್ಯಗಳನ್ನು ಪೂರೈಸುವ ಮಾರ್ಗ ಕಂಡುಕೊಳ್ಳುವುದು, ಸೂರುಗಳ ಮೇಲೆ ಸೌರ ಫಲಕ ಅಳವಡಿಕೆಯನ್ನು ಹೆಚ್ಚಿಸುವುದು, ತೇಲುವ ಸೌರ ಘಟಕಗಳ ಸ್ಥಾಪನೆ, ಸೋಲಾರ್ ಅಗ್ರಿವೋಲ್ಟಾಯಿಕ್ ಮತ್ತು ಸೌರಶಕ್ತಿಯಿಂದ ನೀರನ್ನು ಪಂಪ್ ಮಾಡುವ ವ್ಯವಸ್ಥೆ ಮೊದಲಾದವು ಸಿಪಿಎಫ್‌ನಲ್ಲಿ ಒಳಗೊಂಡಿವೆ. ಹಸಿರು ಜಲಜನಕಕ್ಕಾಗಿ ಸೌರಶಕ್ತಿಯೂ ಅದರ ಗುರಿಯಾಗಿದೆ.
ಆಶಿಶ್ ಖನ್ನಾ ಅಭಿನಂದನೆ: ಐಎಸ್‌ಎ ಮತ್ತು ಮಾರಿಷಸ್ ಸರ್ಕಾರದ ನಡುವೆ ಮಹತ್ವದ ಒಡಂಬಡಿಕೆ ಏರ್ಪಟ್ಟಿರುವುದಕ್ಕೆ ಐಎಸ್‌ಎ ಮಹಾ ನಿರ್ದೇಶಕ ಆಶಿಶ್ ಖನ್ನಾ ಸಂತೋಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಈ ನಿರ್ಧಾರದಿಂದ ಮಾರಿಷಸ್‌ನಲ್ಲಿ ಸೌರಶಕ್ತಿ ಸವಾಲು ಹಾಗೂ ಅವಕಾಶಗಳನ್ನು ನಿರ್ವಹಿಸಲು ಅನುವಾಗುತ್ತದೆ. ಸ್ಪಷ್ಟವಾದ ಕಾರ್ಯಯೋಜನೆಯಿಂದಾಗಿ, ಸರ್ಕಾರದ ನೀತಿ ಹಾಗೂ ನಿಯಂತ್ರಣ ಕ್ರಮಗಳ ಬೆಂಬಲದಿಂದಾಗಿ ಖಾಸಗಿ ವಲಯವು ಹೂಡಿಕೆ ಮಾಡಲು ಅನುಕೂಲವಾಗುತ್ತದೆ ಎಂದು ಖನ್ನಾ ಹೇಳಿದ್ದಾರೆ.
ಭಾರತದ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರು ಅಧ್ಯಕ್ಷರಾಗಿದ್ದು, ಫ್ರಾನ್ಸ್‌ನ ಅಂತಾರಾಷ್ಟ್ರೀಯ ಸಹಕಾರ ಸಚಿವರು ಸಹ ಅಧ್ಯಕ್ಷರಾಗಿರುವ ಐಎಸ್‌ಎ ಸಂಸ್ಥೆಯ ಮಹತ್ವವನ್ನು ಖನ್ನಾ ವಿವರಿಸಿದ್ದಾರೆ.
ಮಾರಿಷಸ್ ಐಎಸ್ಎ ಸಂಸ್ಥಾಪಕ ದೇಶಗಳಲ್ಲಿ ಒಂದಾಗಿದೆ. ಮಾರಿಷಸ್‌ನಲ್ಲಿ ಭಾರತ ಸರ್ಕಾರದ ನೆರವಿನಿಂದ 1984ರಲ್ಲಿ ಸ್ಥಾಪಿಸಲಾಗಿರುವ ಜವಾಹರಲಾಲ್ ನೆಹರೂ ಆಸ್ಪತ್ರೆಯಲ್ಲಿ ಐಎಸ್‌ಎ ಕೇರ್ಸ್ ಉಪಕ್ರಮದ ಮೂಲಕ ಸೌರಶಕ್ತಿ ಘಟಕ ಸ್ಥಾಪಿಸಲಾಗಿದ್ದು 2024ರಲ್ಲಿ ಅದನ್ನು ಉದ್ಘಾಟಿಸಲಾಗಿದೆ. ಸಣ್ಣ ದ್ವೀಪ ಅಭಿವೃದ್ಧಿ ದೇಶಗಳಲ್ಲಿ (ಎಸ್‌ಐಡಿಎಸ್) ಆರೋಗ್ಯ ವ್ಯವಸ್ಥೆಗಳನ್ನು ಸೌರಶಕ್ತಿಕರಣಗೊಳಿಸುವುದು ಐಎಸ್‌ಎ ಕೇರ್‌ನ ಗುರಿಯಾಗಿದೆ.
ಮಾರಿಷಸ್‌ನ ಇಂಧನ ಮತ್ತು ಸಾರ್ವಜನಿಕ ಸೌಲಭ್ಯಗಳ ಜೀನತ್ ಗುನೆಸ್-ಗೂಲ್ಬರ್ ಅವರು, ಇದು ಆಫ್ರಿಕಾ ವಲಯದಲ್ಲಿ ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟದ ಜೊತೆಗೆ ಮೊದಲ ಸಿಪಿಎಫ್ ಉಪಕ್ರಮವಾಗಿದೆ. ಸೌರಶಕ್ತಿ ವಲಯದಲ್ಲಿ ಮಾರಿಷಸ್ ದೇಶವು ಈ ಖಂಡದಲ್ಲಿ ಮಾರ್ಗಪ್ರವರ್ತಕವಾಗಲಿದೆ ಎಂದು ಹೇಳಿದರು. ಈ ಒಪ್ಪಂದದೊಂದಿಗೆ, ಸೋಲಾರ್‌ಎಕ್ಸ್ ಆ್ಯಕ್ಸಲೇಟರ್ ಕಾರ್ಯಕ್ರಮವೂ ಸೇರಿ ವಾರ ಕಾಲ ನಡೆದ ವಿವಿಧ ಚಟುವಟಿಕೆಗಳಿಗೆ ತೆರೆಬಿತ್ತು.