

ಶಿರಸಿ: ನಗರದ ಅರಣ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಅಂತರ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ವಿಜಯಪುರದ ವಿದ್ಯಾರ್ಥಿ ಮೌನೇಶ ಕಲ್ಲಪ್ಪ ಬಡಿಗೇರ ಮೊದಲ ಸ್ಥಾನ ಪಡೆದರು.
ಇಲ್ಲಿಯ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಅಂತರ ಮಹಾವಿದ್ಯಾಲಯಗಳ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ 5 ಕಾಲೇಜುಗಳ 30ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಸುಮಾರು 12 ಕಿ.ಮೀ. ಅಂತರದ ಓಟವನ್ನು 46 ನಿಮಿಷಗಳಲ್ಲಿ ಮುಗಿಸಿದ ಮೌನೇಶ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರು. 47 ನಿಮಿಷದಲ್ಲಿ ಗುರಿ ತಲುಪಿದ ಹನುಮನಟ್ಟಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿ ಪ್ರದೀಪಗೌಡ ಪಾಟೀಲ ದ್ವಿತೀಯ ಸ್ಥಾನ ಪಡೆದರು. ಗುಡ್ಡಗಾಡು ಓಟದ ಸ್ಪರ್ಧೆಯ ಸಮಗ್ರ ಪ್ರಶಸ್ತಿಯನ್ನು ಕೃಷಿ ಮಹಾವಿದ್ಯಾಲಯ, ಧಾರವಾಡ ಮತ್ತು ರನ್ನರ್ಅಪ್ ಸ್ಥಾನವನ್ನು ವಿಜಯಪುರದ ಕೃಷಿ ಮಹಾವಿದ್ಯಾಲಯ ತನ್ನದಾಗಿಸಿಕೊಂಡಿತು.
ಗುಡ್ಡಗಾಡು ಓಟದ ಸ್ಪರ್ಧೆಗೆ ಶಿರಸಿ ವಲಯಾರಣ್ಯಾಧಿಕಾರಿ ಶಿವಾನಂದ ನಿಂಗಾಣಿ ಹಾಗೂ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಆರ್. ವಾಸುದೇವ ಚಾಲನೆ ನೀಡಿದರು. ಡಿಎಫ್ಒ ಡಾ. ಅಜ್ಜಯ್ಯ ಜೆ.ಆರ್., ವಿಜೇತ ವಿದ್ಯಾರ್ಥಿಗಳು ಹಾಗೂ ತಂಡಕ್ಕೆ ಬಹುಮಾನ ವಿತರಿಸಿದರು. ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಹನುಮಂತ ಎಂ., ರಾಘವೇಂದ್ರ ಜೆ. ಮತ್ತು ಮಹೇಶ ಕೆ.ವಿ., ಸ್ಪರ್ಧೆ ಆಯೋಜನೆಯ ನೇತೃತ್ವ ವಹಿಸಿದ್ದರು.