ಬೆಂಗಳೂರು : ಹರಿಹರಪುರ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ ಎಚ್.ಆರ್.ರಂಗನಾಥ್ (ಜಯವರ್ಧನ್). ಪಾಠ, ಉಪನ್ಯಾಸಗಳ ಮೂಲಕವೇ ಅವರು ವಿದ್ಯಾರ್ಥಿಗಳಿಗೆ ನೆಚ್ಚಿನ ಪ್ರಾಧ್ಯಾಪಕರಾಗಿರುತ್ತಾರೆ. ಅಂತಹ ರಂಗನಾಥ್, ವಿದ್ಯಾರ್ಥಿನಿ ಕಸ್ತೂರಿ (ಸುಲಕ್ಷಾ) ಪ್ರೀತಿಯಲ್ಲಿ ಬೀಳುತ್ತಾರೆ. ಕಲಿಸುವ ಗುರುವೇ, ವಿದ್ಯಾರ್ಥಿನಿಯನ್ನು ಪ್ರೀತಿಸಿದರೆ ಈ ಸಮಾಜ ಒಪ್ಪುತ್ತದೆಯೇ? ಇಲ್ಲ. ಕೊನೆಗೆ ಅವರಿಬ್ಬರೂ ದೂರವಾಗುತ್ತಾರೆ. ಮುಂದೆ ಅದೇ ಕಾಲೇಜಿಗೆ ರಂಗನಾಥ್ ಪ್ರಾಂಶುಪಾಲರಾಗಿ ಬಡ್ತಿ ಹೊಂದುತ್ತಾರೆ. ಮುಂದೊಂದು ದಿನ ಕಸ್ತೂರಿ ಮಗಳು ಚೈತ್ರಾ (ಭೂಮಿಕಾ) ರಂಗನಾಥನ ಶಿಷ್ಯೆಯಾಗುತ್ತಾಳೆ. ಪ್ರೀತಿಸಿದ ಹುಡುಗಿಯ ಮಗಳು, ತನ್ನ ವಿದ್ಯಾರ್ಥಿನಿಯಾದಾಗ ರಂಗನಾಥ್ ಅನುಭವಿಸುವ ಭಾವನೆಗಳೇನು? ಹಾಗೆಯೇ, ಮೇಷ್ಟ್ರು- ವಿದ್ಯಾರ್ಥಿನಿಯ ಪ್ರೀತಿಯ ವಿಚಾರ, ಮಗಳು ಚೈತ್ರಾಳಿಗೆ ಗೊತ್ತಾಗುತ್ತದೆಯೇ? ಇಂತಹ ಹಲವು ಪ್ರಶ್ನೆಗಳೊಂದಿಗೆ ‘ಮತ್ತೆ ಮಳೆ ಹೊಯ್ಯುತ್ತಿದೆ’ ಚಿತ್ರದ ಕಥೆ ಸಾಗುತ್ತದೆ. ಲೇಖಕ ಕೆ. ಸದಾಶಿವ ರಚಿಸಿರುವ ಸಣ್ಣ ಕಥೆಯನ್ನು ನಿರ್ದೇಶಕ ಪರಮ್ ಗುಬ್ಬಿ 120 ನಿಮಿಷದ ಸಿನಿಮಾ ಮಾಡಿದ್ದಾರೆ. ಸಣ್ಣಕಥೆಯನ್ನು ಚಿತ್ರವಾಗಿ ತೋರಿಸುವಲ್ಲಿ ಸೃಜನಶೀಲತೆ ಅಷ್ಟೊಂದು ಎದ್ದು ಕಾಣುತ್ತಿಲ್ಲ. ಕೆಲವು ದೃಶ್ಯಗಳು ಪುನಾರವರ್ತನೆಗೊಂಡಿವೆ. ಕಾಲೇಜಿನ ವಿದ್ಯಾರ್ಥಿಗಳ ಹರಟೆಯಲ್ಲಿಯೇ ಮೊದಲರ್ಧ ಸಾಗಿದರೆ, ಇನ್ನು ದ್ವಿತೀಯಾರ್ಧದಲ್ಲಿ ಸಂಭಾಷಣೆ ಹೆಚ್ಚು. ಚಿತ್ರದ ಬರವಣಿಗೆ ಇನ್ನೊಂದಿಷ್ಟು ಹರಿತವಾಗಿ, ಹೆಚ್ಚು ದೃಶ್ಯಗಳನ್ನು ಸೇರಿಸಿದ್ದರೆ ಸಿನಿಮಾ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗುತ್ತಿತ್ತು. ಇಲ್ಲಿ ಮಳೆ ಎಂಬುದು ಪಾತ್ರಗಳ ಸಂಭಾಷಣೆ ಮುಗಿದ ಬಳಿಕ ಬರುವ ಮೌನದ ಸಂಕೇತವಾಗಿದೆ. ಇನ್ನು ರಂಗಭೂಮಿ ಕಲಾವಿದ ಜಯವರ್ಧನ್, ಸುಲಕ್ಷಾ ಕೈರಾ ಅಭಿನಯದಲ್ಲಿ ಗಮನ ಸೆಳೆಯುತ್ತಾರೆ. ಹೊಸಬರಾದ ಲಿಖಿತ್ ಮತ್ತು ಭೂಮಿಕಾಗೆ ಇನ್ನೊಂದಿಷ್ಟು ತಯಾರಿ ಬೇಕಿತ್ತು. ಕಬಡ್ಡಿ ನರೇಂದ್ರ ಬಾಬು ಸಂಭಾಷಣೆ ಅರ್ಥಪೂರ್ಣವಾಗಿವೆ. ಛಾಯಾಗ್ರಾಹಕ ಶಾಂತಾರಾಮ್ ಮಲೆನಾಡಿನ ಸೊಬಗನ್ನು ಚೆನ್ನಾಗಿ ಸೆರೆಹಿಡಿದಿದ್ದಾರೆ.