ಮ್ಯಾಟ್ರಿಮೋನಿಯಲ್ ಸ್ನೇಹ; ಮಹಿಳೆಗೆ 5.75 ಲಕ್ಷ ರೂ. ಧೋಖಾ

matre
Published on

ಬೆಂಗಳೂರು: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯನಾದ ವ್ಯಕ್ತಿ, ಸ್ವೀಡನ್ ಪ್ರಜೆ ಎಂದು ಸ್ನೇಹ ಬೆಳೆಸಿ ಮದುವೆ ಆಗುವುದಾಗಿ ಮಹಿಳೆಗೆ ನಂಬಿಸಿ 5.75 ಲಕ್ಷ ರೂ. ದೋಚಿದ್ದಾನೆ.

ಜೆ.ಪಿ.ನಗರ 7ನೇ ಹಂತದ 33 ವರ್ಷದ ಮಹಿಳೆ ವಂಚನೆಗೆ ಒಳಗಾದವರು. ಈಕೆ ಕೊಟ್ಟ ದೂರಿನ ಮೇರೆಗೆ ದಕ್ಷಿಣ ಸಿಇಎನ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಾರ್ಚ್ 25ರಂದು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಸಿಕ್ಕ ವ್ಯಕ್ತಿ, ದಿನೇಶ್ ಕೆ. ಪಾಟೀಲ್ ಎಂದು ಸಂತ್ರಸ್ತೆಗೆ ಪರಿಚಯಿಸಿಕೊಂಡು ಸ್ವೀಡನ್ ಪ್ರಜೆ ಎಂದು ನಂಬಿಸಿದ್ದ. ಅಲ್ಲದೆ, ಭಾರತದಲ್ಲಿ ತನ್ನ ತಾಯಿ ಮತ್ತು ತಂಗಿ ಇದ್ದು, ಅವರನ್ನು ನೋಡಲು ಭಾರತಕ್ಕೆ ಬರುತ್ತಿದ್ದು, ಅಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದ್ದೆನೆ. ಆ ಸಮಯದಲ್ಲಿ ನಿಮ್ಮನು ಭೇಟಿ ಮಾಡಿ ಮದುವೆ ಮಾಡಿಕೊಳ್ಳುತ್ತೆನೆ ಎಂದು ನಂಬಿಸಿದ್ದ. ವಂಚಕನ ಮಾತಿಗೆ ಮರುಳಾದ ಸಂತ್ರಸ್ತೆ, ಮೊಬೈಲ್‌ನಲ್ಲಿ ಸಂಭಾಷಣೆ ಮತ್ತು ಚಾಟ್ ಮಾಡುತ್ತಿದ್ದಳು.

ಮಾರ್ಚ್ 15ರಂದು ಕರೆ ಮಾಡಿದ ದಿನೇಶ್, ಸ್ವೀಡನ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ನನ್ನ ಬಳಿ 1 ಲಕ್ಷ ಪೌಂಡ್ ಕರೆನ್ಸಿ ಇದ್ದು, ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕಸ್ಟಮ್ಸ್‌ಗೆ ದಂಡ ಪಾವತಿಸಲು ಇಂಡಿಯನ್ ರೂಪಿಸ್ ಇಲ್ಲ. ಅದಕ್ಕಾಗಿ ತಕ್ಷಣ ಬ್ಯಾಂಕ್ ಖಾತೆಗೆ 1 ಲಕ್ಷ ರೂ. ವರ್ಗಾವಣೆ ಮಾಡಿದರೆ ಇಲ್ಲಿಂದ ಬಂದ ಮೇಲೆ ಹಿಂತಿರುಗಿಸುವುದಾಗಿ ನಂಬಿಸಿದ್ದ.

ಕಷ್ಟದಲ್ಲಿ ಇರಬೇಕೆಂದು ನಂಬಿದ ಸಂತ್ರಸ್ತೆ, ಆರೋಪಿ ದಿನೇಶ್ ಹೇಳಿದ ಬ್ಯಾಂಕ್ ಖಾತೆಗೆ 5.75 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಮತ್ತೆ ಮತ್ತೆ ಹಣ ಕೇಳಿದಾಗ ಸಂತ್ರಸ್ತೆ, ಕೊಟ್ಟಿರುವ ಹಣವನ್ನು ವಾಪಸ್ ಕೊಡುವಂತೆ ತಾಕೀತು ಮಾಡಿದ್ದಾರೆ. ಆಗ ದಿನೇಶ್, ಸಂಪರ್ಕ ಕಡಿತ ಮಾಡಿಕೊಂಡು ಆ್ ಮಾಡಿಕೊಂಡಿದ್ದ. ನೊಂದ ಮಹಿಳೆ, ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸೈಬರ್ ಕ್ರೈಂ ಹೆಲ್ಪ್‌ಲೈನ್ 1930ಗೆ ಕರೆ ಮಾಡಿ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net