

ಬೆಂಗಳೂರು: ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಾದ ವಾಲೆಂಟೈನ್ಸ್ ಡೇ ಅಚರಣೆಯನ್ನು ಎದುರಿಸಲು ಫೆಬ್ರವರಿ 14 ರಂದು 'ಮಾತಾಪಿತ' ಪೂಜೆಯನ್ನು ಆಚರಿಸಲಾಗುವುದು ಎಂದು ಶ್ರೀ ರಾಮ ಸೇನೆ ಹೇಳಿದೆ. ವಾಲೆಂಟೈನ್ಸ್ ಡೇ ಅಚರಣೆಯ ಹೆಸರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲತೆ ನಡೆಯುವ ಸಾಧ್ಯತೆ ಇರುವೆಡೆ ಸಂಘಟನೆಯ ಕಾರ್ಯಕರ್ತರನ್ನು ನಿಯುಕ್ತಿಗೊಳಿಸಲಾಗುವುದು ಎಂದಿದೆ.
"ಪ್ರತಿವರ್ಷ ನಾವು ಮಾತಾ-ಪಿತಾ ಪೂಜೆಯನ್ನು ಆಯೋಜಿಸುತ್ತೇವೆ. ಈ ಬಾರಿಯೂ 50 ರಿಂದ 60 ಸ್ಥಳಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು" ಎಂದು ಸಂಘಟನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕರ್ನಾಟಕದ ವಿವಿಧ ಭಾಗಗಳಲ್ಲಿ ಸಂಘಟನೆಯ ಕಾರ್ಯಕರ್ತರು ಪಬ್, ಬಾರ್, ಮಾಲ್, ಐಸ್ಕ್ರೀಂ ಪಾರ್ಲರ್, ಪಾರ್ಕ್ನಂತಹ ಸ್ಥಳಗಳಲ್ಲಿ ಅಶ್ಲೀಲ ನಡವಳಿಕೆಗೆ ಅವಕಾಶ ಕೊಡದಂತೆ ಎಚ್ಚರ ವಹಿಸಲಿದ್ದಾರೆ. ಕಾರ್ಯಕರ್ತರು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಿಲ್ಲ, ಬದಲಿಗೆ, ಈ ರೀತಿಯ ಘಟನೆಗಳನ್ನು ತಡೆಯಲು ಪೊಲೀಸರೊಂದಿಗೆ ಸಹಕರಿಸುತ್ತಾರೆ ಎಂದು ಮುತಾಲಿಕ್ ಹೇಳಿದ್ದಾರೆ.
“ಪಾಶ್ಚಿಮಾತ್ಯ ಸಂಸ್ಕೃತಿಯು ನಮ್ಮ ಯುವಜನರನ್ನು ಅದರೆಡೆಗೆ ಆಕರ್ಷಿಸಲು ಪ್ರಯತ್ನಿಸುತ್ತಿದೆ. ಇದು ನಮ್ಮ ಅಮೂಲ್ಯ ಪರಂಪರೆಯ ಮೇಲೆ ವಿಪರೀತವಾದ ಪರಿಣಾಮ ಉಂಟುಮಾಡುತ್ತಿದೆ. ಡ್ರಗ್ಸ್, ಸೆಕ್ಸ್, ಲವ್ ಜಿಹಾದ್ನ ಸಮಸ್ಯೆಗಳು ಹೆಚ್ಚುತ್ತಿವೆ. ವಾಲೆಂಟೈನ್ಸ್ ಡೇ ಅದರ ಸ್ಪಷ್ಟ ಉದಾಹರಣೆಯಾಗಿದೆ” ಎಂದು ಶ್ರೀ ರಾಮ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.(ಏಜೆನ್ಸೀಸ್)