

ಬೆಂಗಳೂರು ಇತ್ತೀಚೆಗೆ ನೇಮಕಗೊಂಡಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ ಹೆರಿಗೆ ರಜೆ ನೀಡುವ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಜಿಜ್ಞಾಸೆ ಎದುರಾಗಿದೆ.
ಸೇವೆಗೆ ಸೇರುವ ಪೂರ್ವದಲ್ಲಿ ಹೆರಿಗೆಯಾಗಿದ್ದ ಹಾವೇರಿ ಜಿಲ್ಲೆಯ ಇಬ್ಬರು ಶಿಕ್ಷಕಿಯರು ಸೇರಿ ಹಲವು ಜಿಲ್ಲೆಗಳಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡ ಕೂಡಲೇ ಹೆರಿಗೆ ರಜೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸೇವೆಗೆ ಸೇರವ ಮುನ್ನ ಹೆರಿಗೆಯಾಗಿರುವುದರಿಂದ ಶಿಕ್ಷಕಿಯರಿಗೆ ರಜೆ ನೀಡಬೇಕೋ ಬೇಡವೋ ಎಂಬ ಗೊಂದಲ ಜಿಲ್ಲಾ ಉಪ ನಿರ್ದೇಶಕರಿಗೆ (ಡಿಡಿಪಿಐ) ಮೂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡುವಂತೆ ಕೋರಿ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಪ್ರಕರಣವೇನು?
ಒಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಪೂರ್ಣಗೊಳಿಸಿದೆ. ಇದೇ ವೇಳೆ ಹಾವೇರಿ ಜಿಲ್ಲೆ, ಬ್ಯಾಡಗಿ ತಾಲ್ಲೂಕಿನ ಬಿಸಿಲಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ನೇಮಕಾತಿಗೊಂಡಿರುವ ಶಿಕ್ಷಕಿಯೊಬ್ಬರು ಅ.8, 2023ರಂದು ಎರಡನೇ ಮಗುವಿಗೆ ಜನ್ಮ ನೀಡಿದ್ದು, ಅ.27ರಂದು ಸೇವೆಗೆ ವರದಿ ಮಾಡಿಕೊಂಡಿದ್ದಾರೆ.
ಹಾಗೆಯೇ, ಹಾನಗಲ್ ತಾಲ್ಲೂಕಿನ ಬಾಳಂಬೀಡು ಸರ್ಕಾರಿ ಹಿರಿಯ ಪ್ರಾಥಮಕ ಶಾಲೆಗೆ ನೇಮಕಾತಿಗೊಂಡಿರುವ ಮತ್ತೊಬ್ಬ ಶಿಕ್ಷಕಿ ಸೆ. 26ರಂದು ಮಗುವಿಗೆ ಜನ್ಮ ನೀಡಿದ್ದು, ಅ. 31ರಂದು ಸೇವೆಗೆ ವರದಿ ಮಾಡಿಕೊಂಡಿದ್ದಾರೆ. ಮಗುವಿಗೆ ಜನ್ಮ ನೀಡಿರುವ ಕಾರಣ ಹೆರಿಗೆ ರಜೆ ಮಂಜೂರಾತಿಗಾಗಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.
ಸರ್ಕಾರಿ ನೌಕರರಿಗೆ 180 ದಿನಗಳ ಹೆರಿಗೆ ರಜೆ ನೀಡಲು ಅವಕಾಶವಿದೆ. ಆದರೆ, ಈ ಇಬ್ಬರು ಶಿಕ್ಷಕಿಯರು ಸೇವೆಗೆ ಸೇರುವ ಪೂರ್ವದಲ್ಲಿ ಹೆರಿಗೆಯಾಗಿದ್ದು, ಹೆರಿಗೆ ರಜೆ ಸೌಲಭ್ಯದ ವ್ಯಾಪ್ತಿಗೆ ಬರುವುದಿಲ್ಲ. ಅವರು ಸೇವೆಗೆ ಸೇರಿದ ನಂತರ ರಜೆ, ವೇತನ ಹಾಗೂ ಇತರೆ ಸೌಲಭ್ಯಗಳು ನೌಕರರಿಗೆ ಸಿಗಲಿವೆ. ಸೇವೆಗೆ ಸೇರುವ ಮುನ್ನ ಆಗುವ ಘಟನೆಗಳಿಗೆ ಸೇವಾ ನಿಯಮಗಳು ಅನ್ವಯವಾಗುವುದಿಲ್ಲ. ಹಾಗಾಗಿ, ಈ ಸಂಬಂಧ ಸೂಕ್ತ ಮಾರ್ಗದರ್ಶನ ಕೋರಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.
ರಜೆ ಇದೆ, ವೇತನ ಇಲ್ಲ?
ಮಾನವೀಯತೆ ಆಧಾರದಲ್ಲಿ ರಜೆ ನೀಡಬಹುದು. ಸೇವೆಯನ್ನು ಕೂಡ ವರದಿ ಮಾಡಿಕೊಂಡ ದಿನದಿಂದಲೇ ಪರಿಗಣಿಸಲಾಗುತ್ತದೆ. ಆದರೆ, ವೇತನ ನೀಡಲಾಗುವುದಿಲ್ಲ. ಹೆರಿಗೆ ರಜೆ ಮುಗಿಸಿ ಬಂದು ಮತ್ತೆ ಸೇವೆಗೆ ವರದಿ ಮಾಡಿಕೊಂಡ ನಂತರ ವೇತನ ನೀಡಲಾಗುತ್ತದೆ ಎಂದು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸರ್ಕಾರಿ ಸೇವೆಗೆ ಸೇರಿದ ನಂತರ ಶಿಕ್ಷಕರಿಗೆ ಹೆರಿಗೆ ನೀಡಬೇಕು. ಸಂಬಂಧಪಟ್ಟ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. - ಪ್ರಸನ್ನಕುಮಾರ್, ಪ್ರಾಥಮಿಕ ಶಿಕ್ಷಣ ನಿರ್ದೇಶಕ