ಕ್ವಾರಂಟೈನ್ ಕೇಂದ್ರದಲ್ಲಿದ್ದ ಗರ್ಭಿಣಿಗೆ ಹೆರಿಗೆ: ತಾಯಿಗೆ ಪಾಸಿಟಿವ್, ಮಗುವಿಗೆ ನೆಗೆಟಿವ್!

Pragnant
Published on

ವಿಜಯಪುರ: ಮಹಾರಾಷ್ಟ್ರದ ಮುಂಬೈಯಿಂದ ಇಲ್ಲಿಗೆ ಬಂದು ಕ್ವಾರಂಟೈನ್‌ಗೆ ಒಳಗಾಗಿದ್ದ ಗರ್ಭಿಣಿಗೆ ಸೋಮವಾರ ನಾರ್ಮಲ್ ಹೆರಿಗೆ ಆಗಿದೆ.

ಮೇ 13ರಂದು ಮುಂಬೈಯಿಂದ ಖಾಸಗಿ ವಾಹನದಲ್ಲಿ ಬಂದಿದ್ದ 7 ಮಂದಿ ಕಾರ್ಮಿಕರಲ್ಲಿ ಈ 19 ವರ್ಷದ ಗರ್ಭಿಣಿ ಯುವತಿಯೂ ಇದ್ದಳು. ಅಂದೇ ಇವರನ್ನೆಲ್ಲ ಜಿಲ್ಲಾಡಳಿತವು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿತ್ತು.

ನಂತರ ಹೆರಿಗೆ ನೋವು ಕಂಡು ಬಂದ ಹಿನ್ನೆಲೆಯಲ್ಲಿ ಗಂಟಲ ದ್ರವವನ್ನು ಜಿಲ್ಲಾಡಳಿತ ಪರೀಕ್ಷೆಗೆ ಕಳಿಸಿತ್ತು. ಬಳಿಕ ಆರೋಗ್ಯ ಇಲಾಖೆಯವರು ಆಗಮಿಸಿ ಹೆರಿಗೆ ಮಾಡಿಸಿದ್ದರು. ಆರೋಗ್ಯವಂತ ಹೆಣ್ಣುಮಗುವಿಗೆ ಆಕೆ ಜನ್ಮ ನೀಡಿದ್ದಳು. ಮಗುವಿನ ಗಂಟಲ ದ್ರವವನ್ನೂ ಅಂದೇ ಕರೊನಾ ಪರೀಕ್ಷೆಗೆ ಕಳಿಸಲಾಗಿತ್ತು.

ಈಗ ತಾಯಿ ಮಗು ಇಬ್ಬರ ವರದಿಗಳೂ ಜಿಲ್ಲಾಡಳಿತದ ಕೈಸೇರಿದ್ದು, ತಾಯಿಯದು ಪಾಸಿಟಿವ್, ಮಗುವಿನದು ನೆಗೆಟಿವ್ ವರದಿ ಬಂದಿದೆ.

ಇವರ ಜತೆ ಉಳಿದವರ ಗಂಟಲ ದ್ರವವನ್ನೂ ಅಂದೇ ಕರೊನಾ ಪರೀಕ್ಷೆಗೆ ಕಳಿಸಲಾಗಿತ್ತು. ಈ ಪೈಕಿ ಆ ಗರ್ಭಿಣಿಯಲ್ಲದೆ, ಇತರ ನಾಲ್ವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 45 ವರ್ಷದ ವ್ಯಕ್ತಿ, 10 ವರ್ಷದ ಬಾಲಕ, 20 ವರ್ಷದ ಇನ್ನೊಬ್ಬ ಯುವತಿ, 22 ವರ್ಷದ ಯುವಕ ಇದರಲ್ಲಿ ಸೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net