ಶಾಶ್ವತ ಶಿವಧ್ಯಾನದಲ್ಲಿ ಲೀನರಾದ ಮಾತೆ ಮಾಣಿಕೇಶ್ವರಿ; ಲಕ್ಷಾಂತರ ಭಕ್ತರಿಂದ ಅಮ್ಮನ ಅಂತಿಮ ದರ್ಶನ

MATA
Published on

ಕಲಬುರಗಿ:  ‘ಅಹಿಂಸಾ ಪರಮೋ ಧರ್ಮ’ ಎನ್ನುತ್ತಲೇ ಭಕ್ತರನ್ನು ಕಷ್ಟಗಳಿಂದ ದೂರವಾಗಿಸಿ ಸನ್ಮಾರ್ಗದಲ್ಲಿ ನಡೆಸುವ ಕಾಯಕದಲ್ಲಿ ತೊಡಗಿಕೊಂಡಿದ್ದ ಮಾತೆ ಮಾಣಿಕೇಶ್ವರಿ ಅವರು ಏಳು ದಶಕಗಳಿಂದ ಶಿವಧ್ಯಾನ ಮಾಡುತ್ತಿದ್ದ ಮಾಣಿಕಗಿರಿ ಗುಹೆಯಲ್ಲಿ ಸೋಮವಾರ ಶಾಶ್ವತವಾಗಿ ಶಿವಧ್ಯಾನದಲ್ಲಿ ಲೀನರಾದರು.

ಯಾನಗುಂದಿ ಸೂರ್ಯನಂದಿ ಬೆಟ್ಟದಲ್ಲಿ ಮಧ್ಯಾಹ್ನ 2.27ರ ವರೆಗೆ ಅಮ್ಮನವರ ಲಿಂಗ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಶರೀರವನ್ನು ದೇವಾಲಯದೊಳಗೆ ಕೊಂಡೊಯ್ದು ನಾಗಸಿಂಹಾಸನದ ಮೇಲೆ ಕುಳ್ಳಿರಿಸಿ ರುದ್ರಾಭಿಷೇಕ ಮಾಡಿದ ಬಳಿಕ ಚಂದನ ಲೇಪಿಸಿ ಕ್ಷೀರಾಭಿಷೇಕ ಮಾಡಲಾಯಿತು. ಮಠಾಧೀಶರು ಹಾಗೂ ಅರ್ಚಕರು ವೇದಘೊಷ, ಮಂತ್ರಗಳನ್ನು ಪಠಿಸಿದರು.

ವೀರಶೈವ- ಲಿಂಗಾಯತ ಸಂಪ್ರದಾಯದಂತೆ ಪೂಜೆ ನೆರವೇರಿದ ನಂತರ ಗುಹೆಯ ಲಿಂಗದ ಹಿಂಭಾಗದಲ್ಲಿ ಮಾತಾಜಿ ತಮ್ಮ ಇಚ್ಛೆಯಂತೆ ನಿರ್ವಿುಸಿಕೊಂಡಿದ್ದ ಸಮಾಧಿಯಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿರುವಂತೆ ಮಾಡಿ ಸುತ್ತ ವಿಭೂತಿ, ಬಿಲ್ವಪತ್ರೆ, ಶ್ರೀಶೈಲ ಮಲ್ಲಿಕಾರ್ಜುನ ಪ್ರಸಾದ ಲೇಪಿಸಿ ಸಮಾಧಿ ಕ್ರಿಯೆ ಪೂರ್ಣಗೊಳಿಸಲಾಯಿತು. ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ, ಪ್ರಮುಖರಾದ ಮಲ್ಲಿಕಾರ್ಜುನ ಸ್ವಾಮಿ, ಲಕ್ಷ್ಮಣ ಸ್ವಾಮಿ, ನಂದೀಶ್ವರ ಸ್ವಾಮೀಜಿ, ಗೋಪಾಲ ಆಚಾರ್ಯ, ಪಂಡಿತರಾದ ಅಪ್ಪಾಸಾಹೇಬ ಅವರು ಶಾಸ್ತ್ರೋಕ್ತವಾಗಿ ಅಂತಿಮ ವಿಧಿ ವಿಧಾನ ನಡೆಸಿಕೊಟ್ಟರು.

ಸೋಮವಾರ ನಸುಕಿನ ಜಾವದಿಂದ ಬೆಳಗ್ಗೆ 9ರವರೆಗೂ ಯಾನಾಗುಂದಿ ಸುತ್ತ ಬಿರುಸಿನ ಮಳೆಯಾಯಿತು. ಭಕ್ತರು ಮಳೆಯನ್ನೂ ಲೆಕ್ಕಿಸದೆ ಅಮ್ಮನ ಪಾರ್ಥಿವ ಶರೀರದ ದರ್ಶನ ಪಡೆಯುವುದನ್ನು ಮುಂದುವರಿಸಿದರು.

ಸರ್ಕಾರಿ ಗೌರವ ಸಲ್ಲಿಕೆ

ಶನಿವಾರ ರಾತ್ರಿ ಶಿವೈಕ್ಯರಾದ ಮಾತೆ ಮಾಣಿಕೇಶ್ವರಿ ಲಿಂಗ ಶರೀರಕ್ಕೆ ಮಾಣಿಕ್ಯ ಗಿರಿಯಲ್ಲಿ ಸೋಮವಾರ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಸರ್ಕಾರದ ಪರವಾಗಿ ಸಚಿವ ಪ್ರಭು ಚವ್ಹಾಣ್ ಅಂತಿಮ ನಮನ ಸಲ್ಲಿಸಿದರು. ಡಿಎಆರ್ ಇನ್​ಸ್ಪೆಕ್ಟರ್ ಚನ್ನಬಸಪ್ಪ ನೇತೃತ್ವದ ಜಿಲ್ಲಾ ಶಸಸ್ತ್ರ ಪಡೆ ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪುಗಳನ್ನು ಸಿಡಿಸುವ ಮೂಲಕ ಗೌರವ ಸಲ್ಲಿಸಿತು. ಸಂಸದ ಭಗವಂತ ಖೂಬಾ, ಶಾಸಕರಾದ ಬಿ.ಜಿ. ಪಾಟೀಲ್, ರಾಜಕುಮಾರ ಪಾಟೀಲ್ ತೆಲ್ಕೂರ, ತಿಪ್ಪಣ್ಣಪ್ಪ ಕಮಕನೂರ, ವೆಂಕಟರಡ್ಡಿ ಮುದ್ನಾಳ್, ಮಾಜಿ ಸಂಸದ ಡಾ.ಬಸವರಾಜ ಪಾಟೀಲ್ ಸೇಡಂ, ಮಾಜಿ ಸಚಿವ ಬಾಬುರಾವ ಚಿಂಚನಸೂರ, ಡಿಸಿ ಶರತ್ ಬಿ., ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮೊದಲಾದವರು ಪುಷ್ಪಗುಚ್ಛ ಅರ್ಪಿಸಿದರು.

ಉತ್ತರಾಧಿಕಾರಿ ನೇಮಕ ಮಾಡಲ್ಲ

ಯಾನಾಗುಂದಿ ಮಾಣಿಕ್ಯಗಿರಿಯ ಮಾತೆ ಮಾಣಿಕೇಶ್ವರಿ ಅವರ ಉತ್ತರಾಧಿಕಾರಿಯನ್ನಾಗಿ ಯಾರನ್ನೂ ನೇಮಕ ಮಾಡುವುದಿಲ್ಲ ಎಂದು ರೂಪರಹಿತ ಅಹಿಂಸಾ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಸ್ಪಷ್ಟಪಡಿಸಿದರು. ಯಾರಿಗೂ ಉತ್ತರಾಧಿಕಾರಿ ಆಗುವ ಹಕ್ಕಿಲ್ಲ. ಅಮ್ಮನವರಿಗೆ ಯಾರೂ ಸಮಾನರಲ್ಲ. ಅಮ್ಮನವರ ಪೀಠದ ಮೇಲೆ ಕೂರುವ ಶಕ್ತಿ ಯಾರಲ್ಲೂ ಇಲ್ಲ.

ಹೀಗಾಗಿ ಉತ್ತರಾಧಿಕಾರಿ ನೇಮಕ ಮಾಡಲ್ಲ. ಮುಂದಿನ ದಿನಗಳಲ್ಲಿ ಟ್ರಸ್ಟ್ ನವರು ಮತ್ತು ಭಕ್ತರು ಸೇರಿ ಕೈಂಕರ್ಯ ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು. ಅಮ್ಮ ಪರಿಪೂರ್ಣ ತಪಸ್ವಿ, ಮಹಾಯೋಗಿನಿ ಆಗಿದ್ದರು. ಮುಂದೆ ಒಬ್ಬ ಸಾಧು ಬರುತ್ತಾರೆ, ಅವರೊಂದಿಗೆ ಎಲ್ಲರೂ ಸೇರಿ ಹೋಗಿ ಎಂದು ಅಮ್ಮ ಹೇಳಿದ್ದಾರೆ. ಶಿವಯ್ಯ ಸ್ವಾಮಿಯನ್ನು ಪ್ರೇಮದಿಂದ ನೋಡಿಕೊಳ್ಳಿ ಎಂದು ಟ್ರಸ್ಟ್ ಸದಸ್ಯರೆಲ್ಲರಿಗೂ ಅಮ್ಮ ಆಜ್ಞೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ಯಾರು ಅಧ್ಯಕ್ಷ ಆಗಬೇಕು ಎಂಬುದನ್ನು ಟ್ರಸ್ಟ್ ನಿರ್ಧರಿಸುತ್ತದೆ. ಅಮ್ಮ ಉಯಿಲು (ವಿಲ್) ಬರೆದಿಟ್ಟಿದ್ದಾರೆ. ಈ ಬಗ್ಗೆ ನ್ಯಾಯವಾದಿ ಭೀಮರಾವ ಹಾಗೂ ಪಾಟೀಲ್ ಅವರನ್ನು ಕೇಳಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net