ಮಾಸ್ತಿ ಸಾಹಿತ್ಯ ವರ್ತಮಾನಕ್ಕೆ ಶಾಂತಿಕಾರಕ : ದತ್ತಿ ಗೌರವ ಸಮರ್ಪಣೆ-2021 ಕಾರ್ಯಕ್ರಮ

24-klr-1Alternative
Published on

ಕೋಲಾರ : ಮಾಸ್ತಿ ಅವರ ಸಾಹಿತ್ಯ ವರ್ತಮಾನಕ್ಕೆ ಶಾಂತಿಕಾರಕ. ಕದಡಿದ ಮನಸ್ಸುಗಳನ್ನು ಶಾಂತಗೊಳಿಸುವ ಗುಣ ಸಾಹಿತ್ಯದಲ್ಲಿ ಕಾಣಬಹುದು ಎಂದು ಕೇಂದ್ರ ಕಸಾಪ ಗೌರವ ಕಾರ್ಯದರ್ಶಿ ಡಾ.ಕೆ.ರಾಜಕುಮಾರ್ ಹೇಳಿದರು.

ನಗರ ಹೊರವಲಯದ ಮಂಗಸಂದ್ರದಲ್ಲಿನ ಬೆಂಗಳೂರು ಉತ್ತರ ವಿವಿಯ ಸ್ನಾತಕೋತ್ತರ ಕೇಂದ್ರ ಕನ್ನಡ ವಿಭಾಗ, ಮಾಸ್ತಿ ಕನ್ನಡ ಸಂಘ ಮತ್ತು ಜಿಲ್ಲಾ ಕಸಾಪ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ದತ್ತಿ ಗೌರವ ಸಮರ್ಪಣೆ-2021 ಕಾರ್ಯಕ್ರಮದಲ್ಲಿ ವರ್ತಮಾನಕ್ಕೆ ಮಾಸ್ತಿಯವರ ಸಾಹಿತ್ಯ ಹಾಗೂ ಕನ್ನಡ ಸಂಸ್ಕೃತಿ ಬೆಳವಣಿಗೆಯಲ್ಲಿ ದತ್ತಿಗಳ ಪಾತ್ರದ ಕುರಿತು ಉಪನ್ಯಾಸ ನೀಡಿದರು.

ಇಂದು ಸಾಹಿತ್ಯ ಕ್ಷೇತ್ರ ಬಣಗುಡುತ್ತಿದೆ. ಇಂದು ಕೆಲ ಸಾಹಿತಿಗಳ ಬರವಣಿಗೆಗಳು ಸಂಘರ್ಷದ ಕಿಡಿ ಹೊತ್ತಿಸುತ್ತವೆ.ಮಾನವೀಯ ಅಂತಃಕರಣದ ಸ್ಪರ್ಶ ಇಲ್ಲವಾಗಿದೆ . ಆದರೆ ಮಾಸ್ತಿ ಸಾಹಿತ್ಯ ಮನಸ್ಸುಗಳ ನಡುವಿನ ಅಡ್ಡಗೋಡೆಯನ್ನು ನಿವಾರಿಸುವ ಕೆಲಸ ಮಾಡುತ್ತದೆ ಎಂದರು.

ಮಾಸ್ತಿ ಎಣ್ಣೆ ತೀರಿದ ಮೇಲೂ ಸಾಹಿತ್ಯದ ಮೂಲಕ ಪ್ರಜ್ವಲಿಸುವ ಜ್ಯೋತಿ. ಆರೋಗ್ಯ ಪೂರ್ಣ ಸಾಹಿತ್ಯ ರಚಿಸಿದವರು. ಅವರ ಸಾಹಿತ್ಯದಲ್ಲಿ ದುಷ್ಟತನ ಇರಲಿಲ್ಲ. ಪ್ರಕೃತಿ ಜತೆ ಅವಿನಾಭಾವ ಸಂಬಂಧ, ಈ ನೆಲದ ಬದುಕನ್ನು ಸಾಹಿತ್ಯದಲ್ಲಿ ಕಾಣಬಹುದು ಎಂದರು.

ಇಡೀ ಜಗತ್ತಿನಲ್ಲಿ 1970 ದತ್ತಿ ಹೊಂದಿರುವುದು ಕಸಾಪದಲ್ಲಿ ಮಾತ್ರ. ಇದು ಜಾಗತಿಕ ದಾಖಲೆ. 1935 ಬಿಎಂಶ್ರೀ ಗಮಕ ಕಲೆ ಉತ್ತೇಜಿಸಲು 3000 ರೂ.ಗಳ ಪ್ರಥಮ ದತ್ತಿ ಸ್ಥಾಪಿಸಿದ್ದರು. ಕಸಾಪ ಸಾಮಾನ್ಯ ಸದಸ್ಯರಾಗಿದ್ದ ಕೋಲಾರದ ಪಂಡಿತ ಎಚ್.ಹನುಮಂತರಾವ್ 100 ರೂ. ಗಳನ್ನೂ ಇದರೊಂದಿಗೆ ಸೇರ್ಪಡೆ ಮಾಡಿದರು. ಮಾಸ್ತಿ ಕಸಾಪ ಚುಕ್ಕಾಣಿ ಹಿಡಿದಾಗ ಪತ್ನಿ ಪಂಕಜಾ ಹೆಸರಲ್ಲಿ ಕಂಠಪಾಠ ಸ್ಪರ್ಧೆಗೆ 300 ರೂ. ದತ್ತಿ ಸ್ಥಾಪಿಸಿದರು ಎಂದರು.

ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಡಾ.ಡಿ.ಕುಮುದಾ ಮಾತನಾಡಿ, ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಇಂತಹ ಕಾರ್ಯಕ್ರಮ ಉಪಯೋಗಿಸಿಕೊಳ್ಳಬೇಕು, ಇಲ್ಲಿ ನಡೆಯುವ ಚರ್ಚೆ, ಉಪನ್ಯಾಸ ದಾರಿದೀಪವಾಗಲಿ ಎಂದರು.

ಸ್ನಾತಕೋತ್ತರ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕನ್ನಡ ಸೈನಿಕರಾಗಬೇಕು, ಕನ್ನಡವನ್ನು ಸರಿಯಾಗಿ ಓದಿದರೆ ಅನ್ನಭಾಷೆಯಾಗುವ ಶಕ್ತಿ ಇದೆ. ಕನ್ನಡಕ್ಕೆ ಶಕ್ತಿ ಕೊಡಿ, ಆಗ ಕನ್ನಡ ಬೆಳೆಯುತ್ತದೆ ಎಂದು ನಾಗಾನಂದ ಕೆಂಪರಾಜ್ ಆಶಿಸಿದರು.

ಸಿರಿಗನ್ನಡ ವೇದಿಕೆ ಅಧ್ಯಕ್ಷ ಡಾ. ಕೆ.ಎಂ.ಜೆ. ಮೌನಿ ಅವರಿಗೆ ಕನ್ನಡಾನಂದ ಕಸಾಪ ದತ್ತಿ ಪ್ರಶಸ್ತಿ ಹಾಗೂ ಮೈಸೂರು ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಕೇಂದ್ರದ ವಿದ್ವಾಂಸ ಡಾ. ಕುಪ್ನಳ್ಳಿ ಎಂ.ಬೈರಪ್ಪ ಅವರಿಗೆ ಯುವ ಸಾಹಿತ್ಯ ಕಣ್ಮಣಿ ಕಸಾಪ ದತ್ತಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್.ರಾಮ್‌ಪ್ರಸಾದ್, ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಸಿ.ವೆಂಕಟಕೃಷ್ಣಪ್ಪ, ಗೌರವಾಧ್ಯಕ್ಷ ರತ್ಮಪ್ಪ ಮೇಲಾಗಣಿ, ಬೆಂಗಳೂರು ಉತ್ತರ ವಿವಿ ಸಂಯೋಜನಾಧಿಕಾರಿ ಡಾ. ಸಿ.ಎಂ.ನಾಗವೇಣಿ, ಡಾ.ಕೆ.ವಿಲ ನೇತ್ರಾವತಿ, ಡಾ.ಗಾಯತ್ರಿದೇವಿ, ಡಾ. ನಾ. ಮುನಿರಾಜು, ಕನ್ನಡಪರ ಹೋರಾಟಗಾರರಾದ ಅ.ಕೃ.ಸೋಮಶೇಖರ್, ಬಾ.ಹ.ಶೇಖರಪ್ಪ, ನಿವೃತ್ತ ಪ್ರಾಂಶುಪಾಲೆ ರಾಮಚಂದ್ರಪ್ಪ, ಕಲಾವಿದೆ ಮಂಜುಳಾ ಹಾಜರಿದ್ದರು.

ವ್ಯಕ್ತಿಗೆ ಸಾವಿದೆ, ದತ್ತಿಗೆ ಸಾವಿಲ್ಲ. ಪ್ರತಿವರ್ಷ ನಿರಂತರವಾಗಿ ಕನ್ನಡಪರ ಕಾರ್ಯಕ್ರಮಗಳು ನಡೆದುಕೊಂಡು ಹೋಗುತ್ತದೆ. ಈಗಾಗಲೇ ನನ್ನ ತಂದೆ, ತಾಯಿ, ಅತ್ತೆ,ಮಾವನ ಹೆಸರಲ್ಲಿ ದತ್ತಿ ಸ್ಥಾಪಿಸಲಾಗಿದೆ. ಕುಂತೂರು ಚಂದ್ರಪ್ಪ ಹೆಸರಿನಲ್ಲಿ ಸ್ನೇಹಿತರು ಸೇರಿಕೊಂಡು ದತ್ತಿ ಸ್ಥಾಪಿಸಿದ್ದಾರೆ. ಇನ್ನೂ ಎರಡು ದತ್ತಿಗಳು ಸ್ಥಾಪನೆಯಾಗಲಿದೆ. ನಾಗಾನಂದ ಕೆಂಪರಾಜ್, ಕಸಾಪ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net