

ದುಬೈ: 176 ಪ್ರಯಾಣಿಕರಿದ್ದ ಉಕ್ರೇನ್ನ ವಿಮಾನವನ್ನು ಆಕಸ್ಮಿಕವಾಗಿ ಹೊಡೆದುರುಳಿಸಿದ ಬೆನ್ನಲ್ಲೇ ಇರಾನ್ನ ಇಸ್ಲಾಮಿಕ್ ರಿಪಬ್ಲಿಕ್ ಆಡಳಿತದ ವಿರುದ್ಧ ವ್ಯಾಪಕ ಪ್ರತಿಭಟನೆ ಆರಂಭವಾಗಿದೆ.
‘ನಮ್ಮ ಶತ್ರು ಅಮೆರಿಕ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ನಿಜವಾಗಿಯೂ ನಮ್ಮ ಶತ್ರು ಇಲ್ಲೇ ಇದ್ದಾರೆ’ ಎಂದು ಟೆಹರಾನ್ನ ವಿಶ್ವವಿದ್ಯಾಲಯದ ಹೊರಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, ಕಳೆದೆರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ಹಲವು ಕಡೆಗಳಲ್ಲಿ ಇರಾನ್ ಆಡಳಿತದ ವಿರುದ್ಧ ಪ್ರತಿಭಟನೆಗಳು ತೀವ್ರವಾಗಿದ್ದು, ಟೆಹರಾನ್ ಆಜಾದಿ (ಸ್ವಾತಂತ್ರ್ಯ) ಬೋರ್ಡ್ಗಳನ್ನು ಪ್ರದರ್ಶಿಸಿ ರ‍್ಯಾಲಿ ನಡೆಸಲಾಗುತ್ತಿದೆ. ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧವೂ ಜನರು ಘೋಷಣೆ ಕೂಗಿದ್ದಾರೆ. ಉಕ್ರೇನ್ನ ವಿಮಾನ ಹೊಡೆದುರುಳಿಸಿದ್ದಕ್ಕಾಗಿ ಕ್ಷಮೆಯಾಚಿಸಿ, ರಾಜೀನಾಮೆ ನೀಡಿ ಎಂದು ಜನರು ಆಗ್ರಹಿಸುತ್ತಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ಕಡೆಗಳಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹಾಗೂ ಭದ್ರತಾ ಪಡೆಗಳು, ಜಲಫಿರಂಗಿ, ಅಶ್ರುವಾಯು ಪ್ರಯೋಗಿಸಿದ್ದಾರೆ.
ಪ್ರತಿಭಟನಾಕಾರರನ್ನು ಬೆಂಬಲಿಸಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ‘ಇರಾನ್ ನಾಯಕರೇ, ನಿಮ್ಮ ಪ್ರತಿಭಟನಾಕಾರರನ್ನು ಕೊಲ್ಲಬೇಡಿ. ಈಗಾಗಲೇ ಸಾವಿರಾರು ಜನರು ನಿಮ್ಮಿಂದ ಕೊಲ್ಲಲ್ಪಟ್ಟಿದ್ದಾರೆ ಅಥವಾ ಜೈಲಿನಲ್ಲಿದ್ದಾರೆ. ಇದನ್ನು ಇಡೀ ಜಗತ್ತು ನೋಡುತ್ತಿದೆ. ಪ್ರಮುಖವಾಗಿ ಅಮೆರಿಕ ನೋಡುತ್ತಿದೆ. ಇರಾನ್ನಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಪುನಃಸ್ಥಾಪಿಸಿ, ಮಾಧ್ಯಮ ವರದಿಗಾರರಿಗೆ ಮುಕ್ತವಾಗಿ ಕೆಲಸ ನಿರ್ವಹಿಸಲು ಅವಕಾಶ ನೀಡಿ’ ಎಂದು ಬರೆದಿದ್ದಾರೆ. ವಿಮಾನ ಪತನ ಬಳಿಕ ಜನರ ಆಕ್ರೋಶ ಭುಗಿಲೆದ್ದಿರುವುದು ಒಂದು ಕಡೆಯಾದರೆ, ಅಮೆರಿಕದ ನಿರ್ಬಂಧಗಳನ್ನು ಎದುರಿಸಿ ದೇಶದ ಆರ್ಥಿಕ ಪರಿಸ್ಥಿತಿ ನಿಯಂತ್ರಿಸುವುದು ಇರಾನ್ ಆಡಳಿತಕ್ಕೆ ಮತ್ತೊಂದು ಸವಾಲಾಗುತ್ತಿದೆ.
ಹೋರಾಟದ ಹಿನ್ನೆಲೆ
ಕಳೆದ ಬುಧವಾರ 176 ಪ್ರಯಾಣಿಕರಿದ್ದ ಉಕ್ರೇನ್ನ ವಿಮಾನವೊಂದು ಇರಾನ್ ರಾಜಧಾನಿ ಟೆಹರಾನ್ನಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣದಲ್ಲಿ ಪತನವಾಗಿತ್ತು. ಅದರಲ್ಲಿದ್ದ ಎಲ್ಲ ಪ್ರಯಾಣಿಕರೂ ಮೃತಪಟ್ಟಿದ್ದರು. ಬಳಿಕ ತಪ್ಪೊಪ್ಪಿಕೊಂಡ ಇರಾನ್, ಅಮೆರಿಕದ ದಾಳಿ ಭೀತಿಯಲ್ಲಿ ನಮ್ಮ ಮಿಲಿಟರಿ ಪಡೆ ನಡೆಸಿದ ರಾಕೆಟ್ ದಾಳಿಗೆ ಉಕ್ರೇನ್ ವಿಮಾನ ಪತನವಾಯಿತು. ಇದು ಉದ್ದೇಶಪೂರ್ವಕವಲ್ಲ. ಅಚಾತುರ್ಯದಿಂದ ನಡೆದಿದ್ದು ಎಂದು ಹೇಳಿತ್ತು. ಅಮೆರಿಕ ಹಾಗೂ ಕೆನಡಾ ಘಟನೆಯ ತನಿಖೆಗೆ ಆಗ್ರಹಿಸಿವೆ. ಕಳೆದ ವಾರ ಇರಾನ್ನ ಸೇನಾಧಿಕಾರಿ ಖಾಸಿಂ ಸುಲೇಮಾನಿಯನ್ನು ಅಮೆರಿಕ ಹೊಡೆದುರುಳಿಸಿದ ಬಳಿಕ ಉಭಯ ದೇಶಗಳ ನಡುವೆ ಯುದ್ಧೋತ್ಸಾಹ ಹೆಚ್ಚಾಗಿತ್ತು. ಈ ನಡುವೆ ಉಕ್ರೇನ್ನ ವಿಮಾನವನ್ನು ಶತ್ರುಪಡೆ ವಿಮಾನ ಎಂದು ಭಾವಿಸಿ ಇರಾನ್ ರಾಕೆಟ್ ದಾಳಿ ನಡೆಸಿ ಪತನಗೊಳಿಸಿತ್ತು.