ಮಾಚೇನಹಳ್ಳಿಯ ಶಾಹಿ ಎಕ್ಸ್‌ಪೋರ್ಟ್ ಎದುರು ಬೃಹತ್ ಪ್ರತಿಭಟನೆ

shahi exports opp protest
ಶಿವಮೊಗ್ಗ ಶಾಹಿ ಎಕ್ಸ್‌ಪೋರ್ಟ್ ಎದುರು ಪರಿಸರಾಸಕ್ತರ ಪ್ರತಿಭಟನೆಯಲ್ಲಿ ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ ಮಾತನಾಡಿದರು. ಶಾರದಾ ಪೂರ್ಯಾನಾಯ್ಕ, ಸಂತೆಕಡೂರು ವಿಜಯಕುಮಾರ್, ಬುಳ್ಳಾಪುರ ಬಸವರಾಜಪ್ಪ, ಆನಂದ್, ವೆಂಕಟೇಶ್ ನಾಯ್ಕ, ದೇವಿಕುಮಾರ್, ರಮೇಶ್ ಹೆಗ್ಡೆ, ಗೋವಿಂದರಾಜ್, ರುದ್ರೇಶ್, ಆರ್.ಸಿ.ನಾಯ್ಕ, ನಿದಿಗೆ ಚಂದ್ರು ಇದ್ದರು.
Published on

ಶಿವಮೊಗ್ಗ: ಮಾಚೇನಹಳ್ಳಿಯ ಶಾಹಿ ಎಕ್ಸ್‌ಪೋರ್ಟ್ ಮಾಲೀಕರನ್ನು ಬಂಧಿಸಬೇಕು. ರೈತ ಬೆಳೆ ಉಳಿಸಬೇಕು. ಕಾರ್ಮಿಕರ ಆರೋಗ್ಯ ಕಾಪಾಡಬೇಕು ಎಂದು ಒತ್ತಾಯಿಸಿ ರೈತ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು, ಸಣ್ಣ ಕೈಗಾರಿಕೆ ಉದ್ದಿಮೆದಾರರು, ಸಾರ್ವಜನಿಕರು ಗುರುವಾರ ಕಾರ್ಖಾನೆ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಕಳೆದ 10 ವರ್ಷಗಳಿಂದ ಶಾಹಿ ಎಕ್ಸ್‌ಪೋರ್ಟ್ ಕಾರ್ಖಾನೆಯ ಚಿಮಣಿಯಿಂದ ಹೊರಬರುತ್ತಿರುವ ರಾಸಾಯನಿಕ ಮಿಶ್ರಿತ ಧೂಳು ಮತ್ತು ಬಟ್ಟೆಗಳಿಗೆ ಅಳವಡಿಸುವ ಕಲರ್ ಡೈನಿಂದ ಪರಿಸರ ಮಾಲಿನ್ಯವಾಗುತ್ತಿದೆ. ಕಾರ್ಖಾನೆಯಿಂದ ಹೊರಗೆ ಬಿಡುವ ರಾಸಾಯನಿಕ ಮಿಶ್ರಿತ ನೀರು ಸುತ್ತಮುತ್ತಲ ಕೆರೆಗಳಿಗೆ ತಲುಪಿ ಜನ, ಜಾನುವಾರುಗಳಿಗೆ ತೊಂದರೆಯಾಗಿದೆ. ಅಲ್ಲದೇ, ಸುತ್ತಮುತ್ತಲ ಜನ ಕಾರ್ಖಾನೆ ಹೊರಬಿಡುವ ವಿಷದ ಗಾಳಿ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. 20ಕ್ಕೂ ಹೆಚ್ಚು ಕೆರೆಗಳು ಮಲೀನಗೊಂಡು ಜಲಚರ, ಪಶು, ಪಕ್ಷಿಗಳು ಸಾವನ್ನಪ್ಪಿವೆ. ರೈತರ ಸಾವಿರಾರು ಎಕರೆ ಕೃಷಿ ಭೂಮಿ ಬಂಜರಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾರ್ಖಾನೆಯಿಂದ ಹೊರಬಂದಂತಹ ರಾಸಾಯನಿಕ ಮಿಶ್ರಿತ ಧೂಳಿನಿಂದ ಸಣ್ಣ ಕೈಗಾರಿಕಾ ಘಟಕಗಳ ಮೇಲ್ಛಾವಣಿ ಮತ್ತು ಕಬ್ಬಿಣದ ವಸ್ತುಗಳು ಹಾಗೂ ಯಂತ್ರೋಪಕರಣಗಳ ಮೇಲೆ ಪರಿಣಾಮ ಬೀರುತ್ತಿದ್ದು, ಸಣ್ಣ ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ಬಂದಿದೆ. ಅಲ್ಲದೇ, ಈ ಪ್ರದೇಶದ ಜನರು ದಮ್ಮು, ಕೆಮ್ಮು, ಚರ್ಮದ ಕಾಯಿಲೆಗಳಿಗೆ ಗುರಿಯಾಗಿದ್ದಾರೆ. ಕಾರ್ಖಾನೆಯಿಂದ ಕೆಟ್ಟ ವಾಸನೆ ಬರುತ್ತಿದೆ. ಇಲ್ಲಿ ಜನರು ಜೀವಿಸುವುದೇ ಕಷ್ಟವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕಿ ಶಾರದಾ ಪೂರ್ಯಾನಾಯ್ಕ, ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್, ಮುಖಂಡರಾದ ಸಂತೆಕಡೂರು ವಿಜಯಕುಮಾರ್, ಬುಳ್ಳಾಪುರ ಬಸವರಾಜಪ್ಪ, ಆನಂದ್, ವೆಂಕಟೇಶ್ ನಾಯ್ಕ, ದೇವಿಕುಮಾರ್, ರಮೇಶ್ ಹೆಗ್ಡೆ, ಗೋವಿಂದರಾಜ್, ರುದ್ರೇಶ್, ಆರ್.ಸಿ.ನಾಯ್ಕ, ನಿದಿಗೆ ಚಂದ್ರು ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net