

ನವದೆಹಲಿ: ಜಗತ್ತಿನಾದ್ಯಂತ ಮಾಹಿತಿ-ತಂತ್ರಜ್ಞಾನ ಮತ್ತಿತರ ಕೆಲವು ಕ್ಷೇತ್ರಗಳಲ್ಲಿ ಉದ್ಯೋಗ ಕಡಿತ ಆರಂಭವಾಗಿದೆ. ವೆಚ್ಚ ಕಡಿತ, ಕೃತಕ ಬುದ್ಧಿಮತ್ತೆ ಅಳವಡಿಕೆ, ಜಾಗತಿಕ ಆರ್ಥಿಕ ಸ್ಥಿತಿಗತಿ ಮುಂತಾದ ಕಾರಣಗಳಿಂದ ಉದ್ಯೋಗ ಕಡಿತಕ್ಕೆ ಕಂಪನಿಗಳು ಮುಂದಾಗಿವೆ. ಇದರಿಂದಾಗಿ ಸಾವಿರಾರು ಸಿಬ್ಬಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇಂಟೆಲ್ ಕಂಪನಿ 25,000, ಪ್ಯಾನಾಸೋನಿಕ್ 10,000, ಮೈಕ್ರೋಸಾಫ್ಟ್ 6500, ಮೆಟಾ 3600, ಅಮೆಜಾನ್ 14000, ಐಬಿಎಂ 8000, ಗೂಗಲ್ 500 ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ತಿಳಿಸಿವೆ. ಇದಲ್ಲದೆ ಹ್ಯೂಲೆಟ್ ಪ್ಯಾಕಾರ್ಡ್ 6000, ನಿಸ್ಸಾನ್ 20000, ಸ್ಟಾರ್ ಬಕ್ಸ್ 1100 ಉದ್ಯೋಗಿಗಳನ್ನು ತೆಗೆದುಹಾಕುವುದಾಗಿ ಹೇಳಿವೆ. ವಾಲ್ವಾರ್ಟ್, ಬಾಷ್ ಮುಂತಾದ ಕಂಪನಿಗಳೂ ಈ ಸಾಲಿಗೆ ಸೇರಿವೆ.
ಲೇಆಫ್ಸ್ ಡಾಟ್ ಎಫ್ವೈಐ ಸಮೀಕ್ಷೆಯ ಪ್ರಕಾರ, 2025ರಲ್ಲೇ ಈವರೆಗೆ 169 ಜಾಗತಿಕ ಟೆಕ್ ಕಂಪನಿಗಳು 80 ಸಾವಿರ ನೌಕರರನ್ನು ಕೆಲಸದಿಂದ ತೆಗೆದುಹಾಕಿವೆ. 2024ರಲ್ಲಿ 551 ಟೆಕ್ ಕಂಪನಿಗಳು 1.5 ಲಕ್ಷ ನೌಕರರನ್ನು ತೆಗೆದುಹಾಕಿದ್ದವು.
ಈ ಮಧ್ಯೆ, ಐಟಿ ಉದ್ಯೋಗಿಗಳ ಸಂಘಟನೆಯೊಂದು ಕೇಂದ್ರ ಕಾರ್ವಿುಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಅವರನ್ನು ಸಂರ್ಪಸಿ, ಯಾವ ಕಾರಣಕ್ಕಾಗಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಟಿಸಿಎಸ್ನಿಂದ ವಿವರಣೆ ಕೇಳಬೇಕೆಂದು ಮನವಿ ಮಾಡಿದೆ. ‘ಟಿಸಿಎಸ್ ಕ್ರಮವು ಅಮಾನವೀಯ, ಅನೈತಿಕ, ಅಕ್ರಮ. ಕೂಡಲೇ ಕೇಂದ್ರ ಸರ್ಕಾರ ಆ ಕಂಪನಿಗೆ ನೋಟಿಸ್ ನೀಡಬೇಕು. ಇಲ್ಲದಿದ್ದರೆ ಇದರಿಂದ ಪ್ರೇರೇಪಿತರಾಗಿ ಇತರ ಕಂಪನಿಗಳೂ ಇಂತಹುದೇ ಕ್ರಮಕ್ಕೆ ಮುಂದಾಗುತ್ತವೆ. ಉದ್ಯೋಗಿಗಳ ಕುಟುಂಬದವರ ಸ್ಥಿತಿ ಏನಾಗುತ್ತದೆ ಎಂಬುದನ್ನೂ ಯೋಚಿಸಬೇಕು’ ಎಂದು ಸಂಘಟನೆಯು ಸಚಿವರಿಗೆ ಬರೆದಿರುವ ಪತ್ರದಲ್ಲಿ ಹೇಳಿದೆ.
ಟಿಸಿಎಸ್ 12,000ಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಮನೆಗೆ ಕಳಿಸುವ ನಿರ್ಧಾರ ಕೈಗೊಂಡ ಬೆನ್ನಲ್ಲೇ, ಈ ಕುರಿತ ಬೆಳವಣಿಗೆಗಳ ಮೇಲೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ತೀವ್ರ ನಿಗಾ ಇರಿಸಿದೆಯಲ್ಲದೆ ಆ ಕಂಪನಿಯ ಜತೆ ಸಂಪರ್ಕದಲ್ಲಿದೆ ಎಂದು ಮೂಲಗಳು ತಿಳಿಸಿವೆ. ‘ಐಟಿ ವಲಯದಲ್ಲಿ ಏಕೆ ಹೀಗಾಗುತ್ತಿದೆ ಎಂಬುದರ ಬಗ್ಗೆ ಸಚಿವಾಲಯ ಕಳವಳಗೊಂಡಿದೆ. ಕಾರಣಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದೆ. ಉದ್ಯೋಗಗಳು ಹೆಚ್ಚಬೇಕೇ ಹೊರತು ಕಡಿತಗೊಳ್ಳಬಾರದು ಎಂಬುದು ಕೇಂದ್ರದ ಆಶಯವಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.