ದೇಶದಲ್ಲಿ ದೊಡ್ಡಮಟ್ಟದಲ್ಲಿ ಚುನಾವಣಾ ಅಕ್ರಮವಾಗಿದೆ; ಮತಗಳ್ಳತನದಿಂದಲೇ ಮೋದಿ ಪ್ರಧಾನಿ ಆಗಿದ್ದಾರೆ; ರಾಹುಲ್ ಗಾಂಧಿ| Rahul Gandhi

ವಿಜಯವಾಣಿ - 2025-11-07T114323.228
Published on

ನವದೆಹಲಿ: ಮತಗಳ್ಳನದ ಆರೋಪವನ್ನು ಮುಂದುವರೆಸಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ದೇಶದ ಲೋಕಸಭೆ, ರಾಜ್ಯ ಚುನಾವಣೆಗಳಲ್ಲಿ ದೊಡ್ಡ ಮಟ್ಟದಲ್ಲಿ ಚುನಾವಣಾ ಅಕ್ರಮ ನಡೆದಿದೆ. ಮತಗಳ್ಳತನದಿಂದಲೇ ನರೇಂದ್ರ ಮೋದಿ ಪ್ರಧಾನಿ ಆಗಿದ್ದಾರೆ ಎಂದು ಶುಕ್ರವಾರ(ನ. 07) ಆರೋಪಿಸಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಬಿಜೆಪಿ ಮತ್ತು ಚುನಾವಣೆ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿ ಮಾತನಾಡಿರುವ ಅವರು, ಚುನಾವಣಾ ಮತಗಳ್ಳತನದ ಮಾದರಿಯನ್ನು ಬಹಿರಂಗಪಡಿಸಲು ತಮ್ಮ ಪಕ್ಷವು ವ್ಯಾಪಕವಾದ ಪುರಾವೆಗಳನ್ನು ಸಂಗ್ರಹಿಸಿದೆ. ನಮ್ಮಲ್ಲಿ ಸಾಕಷ್ಟು ಸಾಮಗ್ರಿಗಳಿವೆ, ಈ ಪ್ರಕ್ರಿಯೆಯನ್ನು ಮುಂದುವರಿಸುತ್ತೇವೆ.  ಮತಗಳ್ಳತನದ ಮೂಲಕ ನರೇಂದ್ರ ಮೋದಿ ಪ್ರಧಾನಿಯಾಗಿದ್ದು, ಬಿಜೆಪಿ ಮತಗಳ್ಳತನದಲ್ಲಿ ತೊಡಗಿದೆ ಎಂಬುದನ್ನು ನಾವು ದೇಶದ ಜನರಲ್ ಝಡ್ ಯುವಕರಿಗೆ ತೋರಿಸುತ್ತೇವೆ ಎಂದು ಹೇಳಿದರು.

ಚುನಾವಣಾ ವಂಚನೆ ಪ್ರತ್ಯೇಕವಾಗಿಲ್ಲ, ಬದಲಾಗಿ ವ್ಯವಸ್ಥಿತವಾಗಿದೆ. ಹರಿಯಾಣದಲ್ಲಿ ನಡೆದಿದ್ದು ಚುನಾವಣೆಯೇ ಅಲ್ಲ ಎಂಬುದನ್ನು ನಾನು ತೋರಿಸಿದ್ದೇನೆ. ಅಲ್ಲಿ ಇಡೀ ಚುನಾವಣಾ ವ್ಯವಸ್ಥೆಯನ್ನೇ ಕದಿಯಲಾಗಿದೆ. ನಾನು ಮಾಡಿದ ಆರೋಪಗಳಿಗೆ ಚುನಾವಣಾ ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.

ಬಿಜೆಪಿ ನಾನು ಮಾಡಿದ ಆರೋಪವನ್ನು ಸಮರ್ಥಿಸಿಕೊಳ್ಳುತ್ತಿದೆ, ಆದರೆ ನಿರಾಕರಿಸುತ್ತಿಲ್ಲ. ಬ್ರೆಜಿಲ್‌ನ ಮಹಿಳೆಯೊಬ್ಬರು ಮತ ಚಲಾಯಿಸಿದಂತೆ ಮಾಧ್ಯಮಗಳು ಸಣ್ಣ ಉದಾಹರಣೆಗಳನ್ನು ಎತ್ತಿಕೊಳ್ಳುತ್ತಿವೆ. ಬ್ರೆಜಿಲ್ ಪ್ರಜೆಯ ಫೋಟೋ ಮೇಲೆ ಮತದಾನ ಹೇಗೆ ಮಾಡಲಾಯಿತು? ಎಂದು ಅವರು ಪ್ರಶ್ನಿಸಿದ್ದಾರೆ.

ವಾಸ್ತವವೆಂದರೆ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಚುನಾವಣಾ ಆಯೋಗ ಒಟ್ಟಾಗಿ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ. ಸಂವಿಧಾನವು 'ಒಬ್ಬ ವ್ಯಕ್ತಿ, ಒಂದು ಮತ' ಎಂದು ಹೇಳುತ್ತದೆ. ಹರಿಯಾಣದಲ್ಲಿ 'ಒಬ್ಬ ವ್ಯಕ್ತಿ, ಒಂದು ಮತ' ಇರಲಿಲ್ಲ. ಅಲ್ಲಿ ಒಬ್ಬ ವ್ಯಕ್ತಿ, ಬಹು ಮತಗಳಿದ್ದವು. ಈಗ ಬಿಹಾರದಲ್ಲೂ ಅದೇ ರೀತಿ ಮಾಡುತ್ತಿದ್ದಾರೆ ಎಂದು ಇದೇ ವೇಳೆ ರಾಹುಲ್ ಆರೋಪಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net