

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ(ನ. 07) ವಾಯು ಸಂಚಾರ ನಿಯಂತ್ರಣ(ATC) ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷ ಹಿನ್ನೆಲೆ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಗಿದ್ದು, ಅಧಿಕಾರಿಗಳ ಸಮಸ್ಯೆಯನ್ನು ಸರಿಪಡಿಸುತ್ತಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾದ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐಎ) ಪ್ರತಿದಿನ 1,500 ಕ್ಕೂ ಹೆಚ್ಚು ವಿಮಾನಗಳ ಚಲನೆಯನ್ನು ನಿರ್ವಹಣೆ ಮಾಡುತ್ತದೆ. ಗುರುವಾರ ಸಂಜೆಯಿಂದ ತಾಂತ್ರಿಕ ಸಮಸ್ಯೆಗಳಿಂದಾಗಿ ವಾಯು ಸಂಚಾರ ನಿಯಂತ್ರಕರು ವಿಮಾನದ ಸಂದೇಶಗಳನ್ನು ಸ್ವಯಂಚಾಲಿತವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮಾಹಿತಿ ನೀಡಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, "ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ, ಐಜಿಐಎದಲ್ಲಿ ವಿಮಾನ ಕಾರ್ಯಾಚರಣೆಗಳು ವಿಳಂಬವಾಗುತ್ತಿವೆ. ಇದನ್ನು ಆದಷ್ಟು ಬೇಗ ಪರಿಹರಿಸಲು ಅವರ ತಂಡವು ಡಿಐಎಎಲ್ ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ.
ಏರ್ ಟ್ರಾಫಿಕ್ ಕಂಟ್ರೋಲ್ ಡೇಟಾವನ್ನು ಬೆಂಬಲಿಸುವ ಸ್ವಯಂಚಾಲಿತ ಸಂದೇಶ ಸ್ವಿಚಿಂಗ್ ಸಿಸ್ಟಮ್ (AMSS) ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಈ ಅಡಚಣೆಗಳು ಉಂಟಾಗಿವೆ. ನಿಯಂತ್ರಕರು ವಿಮಾನ ಯೋಜನೆಗಳನ್ನು ಹಸ್ತಚಾಲಿತವಾಗಿ ಪ್ರಕ್ರಿಯೆಗೊಳಿಸುತ್ತಿದ್ದಾರೆ. ಇದಿರಿಂದ ಕೆಲವು ವಿಮಾನಗಳು ವಿಳಂಬವಾಗುತ್ತಿವೆ. ತಾಂತ್ರಿಕ ತಂಡಗಳು ವ್ಯವಸ್ಥೆಯನ್ನು ಆದಷ್ಟು ಬೇಗ ಸರಿಪಡಿಸಲು ಕೆಲಸ ಮಾಡುತ್ತಿವೆ ಎಂದು ತಿಳಿಸಿದೆ. (ಏಜೆನ್ಸೀಸ್)