ನಿಯಮ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ: ಪೊಲೀಸರಿಂದ ಲಾಠಿಚಾರ್ಜ್

smart lockdown
Published on

ಸವಣೂರ: ಸಾಮೂಹಿಕ ಪ್ರಾರ್ಥನೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ, ಅದನ್ನು ಉಲ್ಲಂಘಿಸಿ ಪಟ್ಟಣದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆಗೆ ಮುಂದಾಗಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಇಲ್ಲಿನ ಪೇಟೆಯಲ್ಲಿರುವ ಮಸೀದಿಯೊಂದರಲ್ಲಿ ಶುಕ್ರವಾರ ಮಧ್ಯಾಹ್ನ 2ರ ಸುಮಾರಿಗೆ ಸುಮಾರು 30 ಜನರ ಗುಂಪು ಸಾಮೂಹಿಕ ಪ್ರಾರ್ಥನೆಗೆ ಜಮಾಯಿಸಿತ್ತು. ಈ ವಿಷಯ ತಿಳಿದ ಸವಣೂರು ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದರು. ಪ್ರಾರ್ಥನೆ ಮುಗಿಯುವವರೆಗೆ ಕಾಯ್ದು ನಿಂತ ಅಧಿಕಾರಿಗಳ ತಂಡ ನಂತರ ಮಸೀದಿಯಿಂದ ಒಬ್ಬೊಬ್ಬರನ್ನು ಹೊರಗೆ ಕರೆದು ಲಾಠಿ ರುಚಿ ತೋರಿಸಿದರು. ಸಿಪಿಐ ಶಶಿಧರ ಜಿ.ಎಂ. ಹಾಗೂ ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿ ನಿಯಮ ಉಲ್ಲಂಘಿಸಿದವರಿಗೆ ಎಚ್ಚರಿಕೆ ನೀಡಿದರು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡದಲ್ಲಿ 12 ಜನರ ಬಂಧನ: ಲಾಕ್​ಡೌನ್ ಆದೇಶ ಉಲ್ಲಂಘಿಸಿ ಶುಕ್ರವಾರ ಧಾರವಾಡದ ಕುಮಾರೇಶ್ವರ ನಗರದಲ್ಲಿನ ಅಲ್​ಕಾಸೀಂ ಪ್ರಾರ್ಥನಾ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ 12 ಜನರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಧುಗಿರಿ ಬಳಿ ಮಸೀದಿಗೆ ಬೀಗ:

ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಕಿತ್ತಗಳಿ ಗ್ರಾಮದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ ಮುಸ್ಲಿಂ ಸಮುದಾಯದವರನ್ನು ಕರೊನಾ ನಿಯಂತ್ರಣ ದಳದವರು ಶುಕ್ರವಾರ ಸಂಜೆ ಚದುರಿಸಿ, ಮಸೀದಿಗೆ ಬೀಗ ಹಾಕಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಆದೇಶವಿದ್ದರೂ ಶುಕ್ರವಾರ ಸಂಜೆ ಸುಮಾರು 15ಕ್ಕೂ ಹೆಚ್ಚು ಮಂದಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು. ಸ್ಥಳಕ್ಕೆ ತಹಸೀಲ್ದಾರ್ ಡಾ. ವಿಶ್ವನಾಥ್ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ತೆರಳಿ ಮುಂದೆ ಇಂತಹ ಟನೆಗಳ ಸಂಭವಿಸದಂತೆ ಎಚ್ಚರಿಕೆ ನೀಡಿ ಮಸೀದಿಯನ್ನು ಸೀಜ್ ಮಾಡಿರುವುದಾಗಿ ತಹಸೀಲ್ದಾರ್ ಡಾ. ವಿಶ್ವನಾಥ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net