

ಚನ್ನರಾಯಪಟ್ಟಣ: ತಾಲೂಕಿನಾದ್ಯಂತ ಮುಸ್ಲಿಮರು ಸೋಮವಾರ ಶ್ರದ್ಧಾ-ಭಕ್ತಿಯೊಂದಿಗೆ ಸಂಭ್ರಮದಿಂದ ಈದ್ ಉಲ್ ಫಿತರ್ ಆಚರಿಸಿದರು.
ಪಟ್ಟಣದ ಬಾಗೂರು ರಸ್ತೆಯಲ್ಲಿರುವ ಈದ್ಗಾ ಮೈದಾನದ ಆವರಣದಲ್ಲಿ ಸಾವಿರಾರು ಮುಸಲ್ಮಾನರು ರಂಜಾನ್ ಕೊನೆಯ ದಿನದ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಮರ ಪವಿತ್ರ ಮಾಸ ರಂಜಾನ್ ಭಾನುವಾರ ಮುಗಿದಿದ್ದು, ಸೋಮವಾರ ಶವ್ವಲ್ ಮೊದಲನೇ ದಿನದಂದು ಈದ್ ಉಲ್ ಫಿತರ್ ಹಬ್ಬ ಆಚರಿಸಿದರು.
ಬೆಳಗ್ಗೆಯಿಂದಲೇ ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವೃದ್ಧರಿಂದ ಹಿಡಿದು ಚಿಕ್ಕಮಕ್ಕಳು ಕೂಡ ಭಾಗವಹಿಸಿದ್ದರು. ಧರ್ಮ ಗುರುಗಳು ಹಬ್ಬದ ಸಂದೇಶ ಸಾರಿ, ದಾನ-ಧರ್ಮದ ಮಹತ್ವ ಕುರಿತು ಬೋಧಿಸಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.
ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಆಲಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸೋದರತ್ವ ಮೆರೆದರು. ಪ್ರಾರ್ಥನಾ ಸ್ಥಳದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ಪುರಸಭಾ ಅಧ್ಯಕ್ಷ ಸಿ.ಎನ್.ಮೋಹನ್, ಸದಸ್ಯರಾದ ಕವಿತಾ ರಾಜು, ಫಾರ್ಹ ಅನ್ಸರ್ ಪಾಷ, ಮುಖಂಡರು ಭಾಗವಹಿಸಿ ಹಬ್ಬದ ಶುಭಾಶಯ ಕೋರಿದರು. ಹಬ್ಬದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು
ಮೂಲಸೌಕರ್ಯ ಒದಗಿಸಲು ಬದ್ಧ: ಮುಸ್ಲಿಂ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ನೀಡಲು ಬದ್ಧನಿದ್ದೇನೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಿದ್ದು ಅಲ್ಪಸಂಖ್ಯಾತರ ಇಲಾಖೆಯ ಅನುದಾನದಲ್ಲಿ ಬಾಗೂರು ರಸ್ತೆಯಲ್ಲಿರುವ ಈದ್ಗಾ ಮೈದಾನದ ಅಭಿವೃದ್ಧಿಗೆ 15 ಲಕ್ಷ ರೂ. ಅನುದಾನ ನೀಡಲಾಗಿದೆ.
ಚೌಕ್ ಮಸೀದಿ ಆಡಳಿತ ಅಧಿಕಾರಿಗಳಾದ ಶಮಿಲ್ ಪಾಷ, ಮುನೋಹರ್, ಮುಖಂಡರಾದ ಜಬೀವುಲ್ಲಾ ಬೇಗ್, ಸಾಯಿದ್ ಅಹ್ಮದ್, ಮುಕ್ತರ್ ಪಾಷ, ಅಪ್ಸರ್ ಪಾಷ, ಚಾಂದ್ ಪಾಷ, ತಾನ್ಜೀಮ್ ಪಾಷ, ಪುರಸಭಾ ಅಧ್ಯಕ್ಷ ಅನ್ಸಾರ್ ಬೇಗ್, ಮಾಜಿ ಸದಸ್ಯ ಅನ್ಸಾರ್ ಬೇಗ್ ಇತರರು ಇದ್ದರು.