ಸಾಮೂಹಿಕ ವಿವಾಹದಿಂದ ಬಡವರಿಗೆ ಅನುಕೂಲ

Kurgodu Mass Marriage
ಸೋಮಲಾಪುರ ಗ್ರಾಮದಲ್ಲಿ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ ಪುಣ್ಯಾರಾಧನೆ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೂ ಮುನ್ನ ನವಜೋಡಿಗಳ ಮೆರವಣಿಗೆ ನಡೆಯಿತು.
Published on

ಕುರುಗೋಡು: ಸತಿಪತಿಗಳು ಒಂದಾಗಿ ಬಾಳಬೇಕು. ಪತಿಯ ಇಚ್ಛೆ ಅರಿತು ಸತಿಯಿದ್ದರೆ ಮನೆಯೇ ಸ್ವರ್ಗವಾಗುವುದು ಎಂದು ಶ್ರೀ ಸದ್ಗುರು ಷಡಕ್ಷರಿ ಮಹಾಸ್ವಾಮಿ ಅವಧೂತರು ಹೇಳಿದರು.

ಸೋಮಲಾಪುರ ಗ್ರಾಮದಲ್ಲಿ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ 32ನೇ ವರ್ಷದ ಪುಣ್ಯಾರಾಧನೆ ಹಾಗೂ ಜಾತ್ರೋತ್ಸವ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಾಮೂಹಿಕ ವಿವಾಹಗಳು ಹೆಚ್ಚಾದಂತೆಲ್ಲ ಬಡ ಕುಟುಂಬಗಳಿಗೆ ವರದಾನವಾಗಲಿದೆ. ಅಲ್ಲದೆ ಸರ್ವರೂ ಸಮಾನರು ಎಂಬುದನ್ನು ತೋರಿಸುತ್ತದೆ. ಸರ್ವಧರ್ಮ ಸಾಮೂಹಿಕ ವಿವಾಹ ಹಲವು ವರ್ಷಗಳಿಂದ ಶ್ರೀಮಠದಲ್ಲಿ ಜರುಗಿವೆ. ಈ ವರ್ಷ 92 ಜೋಡಿಗಳು ನವ ವಸಂತಕ್ಕೆ ಕಾಲಿಟ್ಟಿದ್ದಾರೆ ಎಂದರು.

ಎಚ್.ವೀರಾಪುರದ ಶಿವಲಿಂಗ ಮಂದಿರದ ಜಡೇಶ ತಾತ ಮಾತನಾಡಿ, ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಬದುಕು ಕಂಡುಕೊಳ್ಳಬಹುದು. ಸರ್ವರಲ್ಲೂ ಪ್ರೀತಿ, ವಿಶ್ವಾಸ ವೃದ್ಧಿಸುತ್ತದೆ. ಮನುಷ್ಯ ಜೀವನದಲ್ಲಿ ಸರಳತೆ ಪಾಲಿಸಿದಾಗ ಶಾಂತಿ-ನೆಮ್ಮದಿ ದೊರೆಯುತ್ತದೆ ಎಂದರು. ಕಾರ್ಯಕ್ರಮಕ್ಕೂ ಮುನ್ನ ನೂತನ ವಧು ವರರನ್ನು ಅವಧೂತರ ಮಠದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮ ದೇವತೆ ಶ್ರೀ ಮಾರೆಮ್ಮ ದೇವಸ್ಥಾನದಲ್ಲಿ ದರ್ಶನ ಪಡೆದು ಮಠಕ್ಕೆ ಮರಳಲಾಯಿತು. ಜಾತ್ರೆಗೆ ಆಗಮಿಸಿದ ಭಕ್ತರು ಶ್ರೀಮಠದಲ್ಲಿ ಪ್ರಸಾದ ಸ್ವೀಕರಿಸಿದರು. ಹಾಲಿ ಶಾಸಕ ಜೆ.ಎನ್.ಗಣೇಶ್ ಹಾಗೂ ಮಾಜಿ ಶಾಸಕ ಟಿ. ಎಚ್. ಸುರೇಶ್ ಬಾಬು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net