

ಷಿಕಾಗೋ: ಅಮೆರಿಕದ ಷಿಕಾಗೋದ ಪ್ರತಿಷ್ಠಿತ ಐಷಾರಾಮಿ ವಾಣಿಜ್ಯ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆಯಿಂದ ಜನರು ಸಾಮೂಹಿಕ ಲೂಟಿಗಳಲ್ಲಿ ತೊಡಗಿಕೊಂಡಿದ್ದರು. ಕಣ್ಣಿಗೆ ಕಾಣಿಸಿದ ಶೋರೂಂಗೆ ನುಗ್ಗಿ ಕೈಯಲ್ಲಿ ಸಾಧ್ಯವಾದಷ್ಟು ಉತ್ಪನ್ನಗಳನ್ನು ಕದ್ದೊಯ್ಯುತ್ತಿದ್ದಾರೆ. ಇವರನ್ನು ತಡೆಯಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದು, 100ಕ್ಕು ಹೆಚ್ಚು ಜನರನ್ನು ಬಂಧಿಸಿದ್ದಾರೆ. ಗುಂಡಿನ ದಾಳಿಯಲ್ಲಿ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಸೂಪರಿಂಟೆಂಡೆಂಟ್ ಡೇವಿಡ್ ಬ್ರೌನ್, ಇದೊಂದು ಶುದ್ಧ ಅಪರಾಧ ಪ್ರಕರಣ. ಮೇ 25ರಂದು ನಡೆದಿದ್ದ ಕಪ್ಪುವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ವಿರೋಧಿಸಿ ನಡೆದ ಸಂಘಟಿತ ಪ್ರತಿಭಟನೆ ಇದಾಗಿರಲಿಲ್ಲ. ಬದಲಿಗೆ ಇದೊಂದು ಸಂಘಟಿತ ಅಪರಾಧವಾಗಿತ್ತು ಎಂದು ಹೇಳಿದ್ದಾರೆ.
ಈ ಘಟನೆಯಲ್ಲಿ 13 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಪೊಲೀಸರು ಸಿಡಿಸಿದ ಗುಂಡು ಆಕಸ್ಮಿಕವಾಗಿ ತಗುಲಿ ಒಬ್ಬ ಭದ್ರತಾ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಕೂಡ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿತ್ರಗಳನ್ನು ಗಮನಿಸಿದಾಗ ಜನರು ಗುಂಪುಗುಂಪಾಗಿ ಅಂಗಡಿಗಳತ್ತ ತೆರಳಿ ಗಾಜಿನ ಬಾಗಿಲು, ಶೋಕೇಸ್ಗಳನ್ನು ಹೊಡೆದು, ಅದರಲ್ಲಿದ್ದ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಗುತ್ತಿರುವುದು ಕಂಡು ಬರುತ್ತದೆ. ಮಿಚಿಗನ್ ಅವೆನ್ಯೂ ಮತ್ತು ಮ್ಯಾಗ್ನಿಫಿಷಿಯಂಟ್ ಮೈಲ್ ಎಂಬ ಮಳಿಗೆಗಳಲ್ಲಿ ಹೆಚ್ಚಿನ ಪ್ರಮಾಣ ಲೂಟಿ ನಡೆದಿದೆ ಎನ್ನಲಾಗಿದೆ.
ಸಾಮೂಹಿಕ ಲೂಟಿ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಹರಿದಾಡುತ್ತಿರುವಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಕೈಗೆ ಸಿಕ್ಕ ವಸ್ತುಗಳನ್ನು ಲೂಟಿ ಮಾಡಿಕೊಂಡು ಹೋದರು ಎಂದು ಬ್ರೌನ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಲೂಟಿಯ ದೃಶ್ಯಗಳು ವೈರಲ್ ಆಗುತ್ತಿರುವಂತೆ ಲೂಟಿಯನ್ನು ತಡೆಯಲು ಈ ಪ್ರದೇಶಕ್ಕೆ 400ಕ್ಕೂ ಹೆಚ್ಚು ಪೊಲೀಸರನ್ನು ರವಾನಿಸಲಾಯಿತು. ಆದರೆ, ಅಷ್ಟರಲ್ಲಿ ಲೂಟಿಕೋರರ ಮೇಲೆ ಗುಂಡಿ ದಾಳಿ ನಡೆಸಿದ್ದರಿಂದ ಸಿಟ್ಟಾದ ಜನರು ಜಮಾವಣೆಗೊಳ್ಳಲಾರಂಭಿಸಿದರು. ಹೆದರದೆ ಕಾರ್ಯಾಚರಣೆ ನಡೆಸಿದ ಪೊಲೀಸರು 100ಕ್ಕೂ ಹೆಚ್ಚು ಲೂಟಿಕೋರರನ್ನು ಬಂಧಿಸಿದರು ಎಂದು ಹೇಳಿದ್ದಾರೆ.