ಎರಡು ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಅಪಾಯಕಾರಿ: ವೈದ್ಯರ ಸಂಸ್ಥೆ ಎಚ್ಚರಿಕೆ

MASK JPG
Published on

ಟೋಕಿಯೋ: ಎರಡು ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ತುಂಬ ಅಪಾಯಕಾರಿ ಎಂದು ಜಪಾನ್ ಮಕ್ಕಳ ತಜ್ಞರ ಸಂಸ್ಥೆ ​​ಹೇಳಿದೆ.

ಜಪಾನ್‌ನಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾದ ನಂತರ ಟೋಕಿಯೊ ಮತ್ತು ಇನ್ನುಳಿದ ನಾಲ್ಕು ಪ್ರದೇಶಗಳಲ್ಲಿ ಸೋಮವಾರ ಪ್ರಧಾನಿ ಶಿಂಜೊ ಅಬೆ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಿದ್ದಾರೆ.

ಕರೊನಾ ವೈರಸ್ ಹರಡುವಿಕೆಯಿಂದಾಗಿ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಈಗ ಹಿಂತೆಗೆದುಕೊಳ್ಳಲಾಗುತ್ತಿದ್ದಂತೆ ಈ ಕುರಿತು ಮಕ್ಕಳ ತಜ್ಱರ ಸಂಸ್ಥೆ ಪೋಷಕರಿಗೆ ತುರ್ತು ಮನವಿಯನ್ನು ನೀಡಿದೆ.

ಎರಡು ವರ್ಷದೊಳಗಿನ ಮಕ್ಕಳು ಮಾಸ್ಕ್ ಧರಿಸುವುದರಿಂದ ಅದು ಮಕ್ಕಳ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತದೆ ಮತ್ತು ಉಸಿರುಗಟ್ಟಿಸುವ ಅಪಾಯವನ್ನು ಹೆಚ್ಚಿಸಬಹುದು ಎಂದು ಜಪಾನ್ ವೈದ್ಯರ ತಂಡ ಹೇಳಿದೆ.

ದೇಶಗಳು ಲಾಕ್​ಡೌನ್ ಹಾಗೂ ಅದಕ್ಕೆ ಸಂಬಂಧಪಟ್ಟ ನಿರ್ಬಂಧಗಳನ್ನು ಸಡಿಲಗೊಳಿಸುವುದರಿಂದ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದರ ಜತೆಗೆ ಜನರು ಮಾಸ್ಕ್​ಗಳನ್ನು ಧರಿಸಬೇಕೆಂದು ಜಗತ್ತಿನಾದ್ಯಂತ ವೈದ್ಯಕೀಯ ತಜ್ಞರು ಶಿಫಾರಸು ಮಾಡುತ್ತಿದ್ದಾರೆ.

ಆದರೆ ಮಕ್ಕಳಿಗೆ ಮಾಸ್ಕ್ ತುಂಬ ಅಪಾಯಕಾರಿ ಎಂದು ಜಪಾನ್ ಮಕ್ಕಳ ತಜ್ಱರ ಸಂಸ್ಥೆ ಪೋಷಕರಿಗೆ ಎಚ್ಚರಿಕೆ ನೀಡಿದೆ. ಮಕ್ಕಳು ಕಿರಿದಾದ ಗಾಳಿಯ ರಂಧ್ರಗಳನ್ನು ಹೊಂದಿರುವುದರಿಂದ ಮಾಸ್ಕ್​​​​ಗಳು ಉಸಿರಾಟಕ್ಕೆ ಕಿರಿಕಿರಿ ಎನಿಸುತ್ತವೆ ಇದು ಅವರ ಹೃದಯದ ಮೇಲೆ ಹೊರೆಯನ್ನು ಹೆಚ್ಚಿಸುತ್ತದೆ. ಮಾಸ್ಕ್ ಅವರಿಗೆ ದೇಹದ ಉಷ್ಣಾಂಶ ಹೆಚ್ಚಿಸುವ ಅಪಾಯವನ್ನುಂಟುಮಾಡುತ್ತದೆ ಎಂದು ಸಂಸ್ಥೆ ಹೇಳಿದೆ.

"2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಬಳಕೆಯನ್ನು ನಿಲ್ಲಿಸೋಣ" ಎಂದು ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಮೆರಿಕದ ರೋಗ ನಿಯಂತ್ರಣ ಕೇಂದ್ರಗಳು ಮತ್ತು ಅಮೆರಿಕದ ಶಿಶು ಅಧ್ಯಯನ ಸಂಸ್ಥೆ ಕೂಡ ಎರಡು ವರ್ಷದೊಳಗಿನ ಮಕ್ಕಳು ಮಾಸ್ಕ್ ಧರಿಸಬಾರದು ಎಂದು ಹೇಳಿವೆ.

ಜಪಾನ್‌ನಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಿದ ಪ್ರಧಾನಿ ಶಿಂಜೋ ಅಬೆ ಒಂದು ವೇಳೆ ವೈರಸ್ ಮತ್ತೆ ಹರಡಲು ಪ್ರಾರಂಭಿಸಿದರೆ ಪುನಃ ತುರ್ತು ಪರಿಸ್ಥಿತಿ ಹೇರಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net