180ಕ್ಕೂ ಅಧಿಕ ಬಟ್ಟೆಯ ಮಾಸ್ಕ್​ ತಯಾರಿಸಿ, ಮಾಧ್ಯಮದವರಿಗೆ, ಪೊಲೀಸರಿಗೆ ವಿತರಿಸಿದ ಪತ್ರಕರ್ತ ನಿಶಾಂತ್​ ಬಿಲ್ಲಂಪದವು

Mask 29 March 20
Published on

ವಿಟ್ಲ: ಕರೊನಾ ವೈರಸ್​ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿರುವ ಹಿನ್ನಲೆಯಲ್ಲಿ ಮಾಸ್ಕ್ ಈಗ ಪ್ರತಿಯೊಬ್ಬರ ಅಗತ್ಯವಾಗಿದೆ. ಆದರೆ ಕಳೆದ ಒಂದು ತಿಂಗಳಿಂದಲೂ ಮಾಸ್ಕ್​, ಸ್ಯಾನಿಟೈಸರ್​ಗಳು ಲಭ್ಯವಾಗುತ್ತಿಲ್ಲ.

ಮಾಲ್​​ಗಳು ಬಂದ್​ ಆಗಿವೆ. ಮೆಡಿಕಲ್​ ಶಾಪ್​​ಗಳಲ್ಲಿ ಮಾಸ್ಕ್​ ಸಂಗ್ರಹಣೆ ಇಲ್ಲ. ಆದರೆ ಲಾಕ್​ಡೌನ್ ಮಧ್ಯೆಯೂ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು, ಪೊಲೀಸರಿಗೆ ಮಾಸ್ಕ್​​ ಬೇಕೇಬೇಕು. ಆದರೆ ಒಂದು ಮಾಸ್ಕ್​ ಅವಧಿ ನಾಲ್ಕು ತಾಸು. ಆಮೇಲೆ ಅದನ್ನು ಡಿಸ್​​ಪೋಸ್​ ಮಾಡಲೇಬೇಕು.

ಹೀಗಿರುವಾಗ ಪತ್ರಕರ್ತ ನಿಶಾಂತ್ ಬಿಲ್ಲಂಪದವು ಅವರು ಬಟ್ಟೆಯಲ್ಲಿಯೇ 180ಕ್ಕೂ ಅಧಿಕ ಮಾಸ್ಕ್​ ತಯಾರಿಸಿ ವಿತರಿಸಿದ್ದಾರೆ.

ನಿಶಾಂತ್​ಗೆ ಸ್ವತಃ ಮಾಸ್ಕ್ ಬೇಕಾಗಿತ್ತು. ಜಿಲ್ಲಾ ಆರೋಗ್ಯಾಧಿಕಾರಿಗಳ ಬಳಿ ಹೋಗಿ ಕೇಳಿದಾಗ ಮಾಸ್ಕ್​ ಕೊರತೆ ಇದೆ ಎಂದು ಹೇಳಿದರು. ಸ್ಥಳೀಯ ವೈದ್ಯರನ್ನು ವಿಚಾರಿಸಿದಾಗ, ಇಂತಹ ಮಾಸ್ಕ್​​ಗಳು ನಾಲ್ಕು ಗಂಟೆ ಬಳಸಿದ ಬಳಿಕ ವೇಸ್ಟ್​ ಆಗುತ್ತವೆ ಎಂದು ಹೇಳಿದರು. ಹಾಗೇ ಬಟ್ಟೆಯಿಂದ ಮಾಸ್ಕ್​ ತಯಾರಿಸಿಕೊಂಡರೆ, ಅದನ್ನು ತೊಳೆದು ಇಸ್ತ್ರಿ ಹಾಕಿ ಮತ್ತೆ ಬಳಸಬಹುದು ಎಂಬ ಸಲಹೆಯನ್ನೂ ನೀಡಿದರು.

ಮತ್ತೆ ಮಾಸ್ಕ್​ಗಾಗಿ ತಿರುಗಾಡುವುದು ವ್ಯರ್ಥ ಎಂದರಿತ ನಿಶಾಂತ್​ ಬಿಲ್ಲಂಪದವು, ಮನೆಯಲ್ಲಿ ತಾಯಿ ಗೀತಾಲಕ್ಷ್ಮೀ ಬಿಲ್ಲಂಪದವು (ಪ್ರಗತಿಪರ ನಾರಾಯಣ್​ ಭಟ್​ ಬಿಲ್ಲಂಪದವು ಅವರ ಪತ್ನಿ) ಅವರ ಸಹಾಯದಿಂದ ಬಟ್ಟೆಯಲ್ಲಿ 180ಕ್ಕೂ ಹೆಚ್ಚು ಮಾಸ್ಕ್​ಗಳನ್ನು ತಯಾರಿಸಿದ್ದಾರೆ. ಅವರ ತಾಯಿಯೇ ಬಟ್ಟೆ ಹೊಲಿಗೆ ಮಾಡಿದ್ದಾರೆ.

ನಿಶಾಂತ್​ ಅವರು ತಾವೇ ತಯಾರಿಸಿದ ಮಾಸ್ಕ್​ಗಳಲ್ಲಿ ವಿಜಯವಾಣಿ ಕಚೇರಿಯಲ್ಲಿರುವವರಿಗೆ 60, ಉಳಿದ ಕೆಲವು ಪತ್ರಕರ್ತರಿಗೆ 10, ವಿಟ್ಲ ಪೊಲೀಸರಿಗೆ 70 ಹಾಗೂ ಕೆಲವು ಸ್ನೇಹಿತರಿಗೆ 40 ಮಾಸ್ಕ್​ಗಳನ್ನು ಹಂಚಿದ್ದಾರೆ.

ಬಿಲ್ಲಂಪದವು ಉಳ್ಳಾಲ್ತಿ ಪಂಚಲಿಂಗೇಶ್ವರ ಸನ್ನಿಧಿ ಮತ್ತು ಕಪಿಲಾ ಗೋಸಂರಕ್ಷಣಾ ಕೇಂದ್ರದಿಂದ ಈ ಕೊಡುಗೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net