

ಬೆಂಗಳೂರು: ಮುಸುಕುಧಾರಿ ಕಳ್ಳನೊಬ್ಬ ಸೋಮವಾರ ಮುಂಜಾನೆ ಪಬ್‌ವೊಂದಕ್ಕೆ ನುಗ್ಗಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಪಿಸ್ತೂಲ್ ತೋರಿಸಿ ಬೆದರಿಸಿ ಕ್ಯಾಶ್ ಕೌಂಟರ್‌ನಲ್ಲಿದ್ದ ೫೦ ಸಾವಿರ ರೂ. ನಗದು ಕಳವು ಮಾಡಿ ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದ್ದಾನೆ.
ಸುಬ್ರಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಜಾಜಿನಗರದ ಜೊಮೆಟ್ರಿ ಬ್ರಿವೇರಿ ಆ್ಯಂಡ್ ಕಿಚನ್ ಹೆಸರಿನ ಪಬ್‌ನಲ್ಲಿ ಸೋಮವಾರ ಮುಂಜಾನೆ ೪ ಗಂಟಗೆ ಈ ಘಟನೆ ನಡೆದಿದೆ. ಪಬ್‌ನ ಮೇಲ್ವಿಚಾರಕ ವಿನಯ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಯ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ಅಂತಸ್ತಿನ ಕಟ್ಟಡದಲ್ಲಿರುವ ಜೊಮೆಟ್ರಿ ಬ್ರೇವರಿ ಆ್ಯಂಡ್ ಕಿಚನ್ ಪಬ್ ಇದೆ. ಮುಂಜಾನೆ ೪ ಗಂಟೆಗೆ ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್, ಕೈಗೆ ಗ್ಲೌಸ್ ಧರಿಸಿದ್ದ ಕಳ್ಳನೊಬ್ಬ ಪಬ್‌ನ ಅಡುಗೆ ಕೋಣೆಯ ಕಿಟಕಿಯ ಮೆಸ್ ಕತ್ತರಿಸಿ ಬಳಿಕ ಕಿಟಕಿಯಲ್ಲಿ ಕೈ ತೂರಿಸಿ ಬಾಗಿಲ ಬೋಲ್ಟ್ ತೆಗೆದು ಪಬ್ ಒಳಗೆ ನುಗ್ಗಿದ್ದಾನೆ. ಈ ವೇಳೆ ಪಬ್ ಒಳಗೆ ಶಬ್ಧವಾದ ಹಿನ್ನೆಲೆಯಲ್ಲಿ ಕಟ್ಟಡದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳ ಪೈಕಿ ಓರ್ವ ಒಳಗೆ ಬರುತ್ತಿದ್ದಂತೆ ಕಳ್ಳ ಅವರಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದಾನೆ. ಬಳಿಕ ಸಿಸಿ ಕ್ಯಾಮರಾಗಳನ್ನು ಆಫ್ ಮಾಡಿ ಕ್ಯಾಶ್ ಕೌಂಟರ್ ಬಳಿ ತೆರಳಿ ೫೦ ಸಾವಿರ ರೂ. ನಗದು ಕಳವು ಮಾಡಿ ಮೊದಲ ಅಂತಸ್ತಿನ ಕಟ್ಟಡದ ಕಿಟಕಿಯಿಂದ ಹೊರಗೆ ಬಂದು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಡೀ ಕಟ್ಟಡ ಶೋಧ:
ಪಿಸ್ತೂಲ್ ನೋಡಿ ಭಯಗೊಂಡ ಸೆಕ್ಯೂರಿಟಿ ಗಾರ್ಡ್ ತಕ್ಷಣ ಪೊಲೀಸ್ ಸಹಾಯವಾಣಿಯಾದ ೧೧೨ ಗೆ ಕರೆ ಮಾಡಿದ್ದಾರೆ. ರಾತ್ರಿ ಗಸ್ತಿನಲ್ಲಿ ಹೊಯ್ಸಳ ಸಿಬ್ಬಂದಿ ಹಾಗೂ ಸುಬ್ರಮಣ್ಯನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಂದಿದ್ದಾರೆ. ಬಳಿಕ ಕ್ಷಿಪ್ರ ಕಾರ್ಯ ಪಡೆಯನ್ನು (ಕ್ಯೂಆರ್‌ಟೀಂ) ಸ್ಥಳಕ್ಕೆ ಕರೆಸಿಕೊಂಡು ಇಡೀ ಕಟ್ಟಡವನ್ನು ಸುತ್ತವರಿದು ನಾಲ್ಕು ಅಂತಸ್ತುಗಳನ್ನು ತೀವ್ರ ಶೋಧ ನಡೆಸಿದ್ದಾರೆ. ಆದರೆ, ಕಟ್ಟಡದೊಳಗೆ ಯಾರು ಇಲ್ಲದಿರುವುದು ಕಂಡು ಬಂದಿದೆ.
ವೃತ್ತಿಪರ ಕಳ್ಳನಿಂದ ಕೃತ್ಯ?
ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅದಾವತ್, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಬ್‌ನ ಸಿಸಿ ಕ್ಯಾಮರಾದಲ್ಲಿ ಮುಸುಕುಧಾರಿ ಕಳ್ಳ ಪಬ್ ಪ್ರವೇಶಿಸಿರುವುದಷ್ಟೇ ಸೆರೆಯಾಗಿದೆ. ವೃತ್ತಿಪರ ಕಳ್ಳನೇ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.