ಮಾಸ್ಕ್ ಧರಿಸದಿದ್ದವರ ವಿರುದ್ಧ ದಂಡ : ಪುರಸಭೆ, ಪೊಲೀಸರಿಂದ ಜಂಟಿ ಕಾರ್ಯಾಚರಣೆ 8,400 ರೂ. ವಸೂಲಿ

15 RMN-MGD P1
Published on

ಮಾಗಡಿ : ಪಟ್ಟಣದಲ್ಲಿ ನಡೆಯುತ್ತಿರುವ ರಂಗನಾಥಸ್ವಾಮಿ ದನಗಳ ಜಾತ್ರೆ ಮೈದಾನಕ್ಕೆ ಮಾಸ್ಕ್ ಹಾಕಿಕೊಳ್ಳದೆ ಬರುವವರಿಗೆ ಪುರಸಭೆ ಮತ್ತು ಪೊಲೀಸರು ದಂಡ ವಿಧಿಸಿದರು.

ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿದ ಪುರಸಭೆ ಅಧಿಕಾರಿಗಳು ಮತ್ತು ಪೊಲೀಸರು ಮಾಸ್ಕ್ ಧರಿಸದವರಿಗೆ ತಲಾ 100 ರೂ.ನಂತೆ ದಂಡ ವಸೂಲಿ ಮಾಡಿದರು. ಜತೆಗೆ ರಾಜ್ಯದಲ್ಲಿ ಕರೊನಾ ಎರಡನೇ ಅಲೆ ಜೋರಾಗಿದ್ದು, ಕರೊನಾ ಮುಂಜಾಗ್ರತೆ ಕೈಗೊಳ್ಳುವಂತೆ ಅರಿವು ಮೂಡಿಸಿದರು.

ಕಳೆದ ವರ್ಷವೂ ಕರೊನಾ ಕಾರಣದಿಂದಾಗಿ ಜಾತ್ರೆ ನಡೆದಿರಲಿಲ್ಲ. ಈ ಬಾರಿ ಜಾತ್ರೆ ನಡೆಯುತ್ತಿರುವುದು ರೈತರಲ್ಲಿ ಸಂತಸ ತಂದಿದೆ. ಮಾಸ್ಕ್ ಖರೀದಿಸಲು ಸಾಧ್ಯವಾಗದೆ ಹೆಗಲ ಮೇಲಿನ ಟವೆಲ್‌ಗಳನ್ನೇ ರೈತರು ಮಾಸ್ಕ್‌ಗಳಂತೆ ಬಳಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ 100 ರೂ. ದಂಡ ವಿಧಿಸಿದರೆ ಎಲ್ಲಿಂದ ತರಲು ಸಾಧ್ಯ. ಕರೊನಾ ಮುಂಜಾಗ್ರತೆ ಪಾಲಿಸುವ ಬಗ್ಗೆ ಅರಿವಿದೆ.

ದಂಡ ಒಂದೇ ಮಾನದಂಡವಲ್ಲ. ಈ ಬಗ್ಗೆ ತಾಲೂಕು ಆಡಳಿತ ಗಮನ ಹರಿಸಬೇಕು ಎಂದು ರೈತ ಶಿವಶಂಕರಯ್ಯ ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯಾಧಿಕಾರಿ ಎಂ.ಎನ್. ಮಹೇಶ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮಾಸ್ಕ್, ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದೆ. ಈ ಬಗ್ಗೆ ಅರಿವು ಮೂಡಿಸುತ್ತಿದ್ದರೂ ನಿರ್ಲಕ್ಷ್ಯ ಸರಿಯಲ್ಲ.

ಕರೊನಾ ನಿಯಮ ಉಲ್ಲಂಸುವವರಿಗೆ ಕಾನೂನು ರೀತಿ ದಂಡ ವಿಧಿಸಲಾಗುತ್ತಿದೆ. ಇಂದು 8,400 ರೂ. ದಂಡ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.ಎಎಸ್‌ಐ ಮಲ್ಲೇಶಯ್ಯ, ಆರೋಗ್ಯಾಧಿಕಾರಿ ಕುಸುಮ, ಪೊಲೀಸ್ ಪೇದೆ ಈರಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net