

ಬೆಂಗಳೂರು: ಕರೊನಾ ಆತಂಕದಿಂದ ನಿರಾಳರಾಗಿದ್ದ ರಾಜ್ಯದ ಜನತೆಗೆ ಇದೀಗ ನಾಲ್ಕನೆಯ ಅಲೆಯ ಭೀತಿಯಿಂದ ಮತ್ತೆ ಕೋವಿಡ್ ತಲೆನೋವು ಎದುರಾಗಿದ್ದು, ಇನ್ನೊಂದೆಡೆ ಸರ್ಕಾರ ಹೊಸದಾಗಿ ಆದೇಶವನ್ನು ಹೊರಡಿಸಿ, ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸಿದೆ.
ದೇಶದಲ್ಲಿ ಹಾಗೂ ದೆಹಲಿ, ಹರಿಯಾಣ, ತಮಿಳುನಾಡು ಮುಂತಾದ ರಾಜ್ಯದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಮತ್ತು ನಾಲ್ಕನೆಯ ಅಲೆಯ ಕುರಿತು ಆತಂಕ ಮೂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಕೆಲಸದ ಸ್ಥಳದಲ್ಲಿ ಮತ್ತು ಪ್ರಯಾಣದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸರ್ಕಾರ ಮತ್ತೊಮ್ಮೆ ಆದೇಶ ಹೊರಡಿಸಿದೆ.
ಜೊತೆಗೆ ಸಾರ್ವಜನಿಕ ಪ್ರದೇಶದಲ್ಲಿ ಉಗುಳುವುದನ್ನೂ ಸರ್ಕಾರ ನಿರ್ಬಂಧಿಸಿದ್ದು, ತಪ್ಪಿದಲ್ಲಿ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದೆ. ಮಾಸ್ಕ್ ಧರಿಸುವ ಜತೆಗೆ ಸಾರ್ವಜನಿಕರು ಕನಿಷ್ಠ 2 ಅಡಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂಬುದಾಗಿಯೂ ನೂತನ ಆದೇಶದಲ್ಲಿ ತಿಳಿಸಿದೆ.