

ಬೆಂಗಳೂರು: ‘ಆನ’ ಚಿತ್ರದ ಬಳಿಕ ಮನೋಜ್ ಪಿ. ನಡಲುಮನೆ ಆಕ್ಷನ್-ಕಟ್ ಹೇಳಿರುವ ಸಿನಿಮಾ ‘ಮೇರಿ’. ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು, ಮೊದಲು ಈ ಚಿತ್ರವನ್ನು ಫೆ. 24ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತೀರ್ವನಿಸಿತ್ತು. ಆದರೆ, ಟ್ರೇಲರ್ಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಥ್ರಿಲ್ ಆದ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಚಿತ್ರದ ಬಿಡುಗಡೆಯನ್ನು ಮಾ. 10ಕ್ಕೆ ಮುಂದೂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಕಾಡಿನ ಮಧ್ಯದಲ್ಲಿರುವ ಗ್ರಾಮದ ಪೊಲೀಸ್ ಠಾಣೆಗೆ ಹೊಸದಾಗಿ ನೇಮಕವಾದ ಎಸ್ಐ ಮುಂದೆ ಹುಡುಗಿಯೊಬ್ಬಳು ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳುತ್ತಾಳೆ. ನಂತರ ಆ ದಿನ ಏನೇನು ಘಟನೆಗಳು ನಡೆಯುತ್ತವೆ ಎನ್ನುವುದೇ ‘ಮೇರಿ’ ಚಿತ್ರದ ಒನ್ಲೈನ್.
ಚಿತ್ರದಲ್ಲಿ ವಿಕಾಶ್ ಉತ್ತಯ್ಯ, ಅನುಷ ಕೃಷ್ಣ, ವಿಕ್ಕಿ, ತೇಜಸ್ವಿನಿ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜತೆಗೆ ಸಂದೀಪ್ ನೀನಾಸಂ, ಭಾರ್ಗವ್ ವೆಂಕಟೇಶ್, ಸುಮಂತ್, ದೀಪಕ್ ಗೌಡ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ವಿನೋದ್ ಭಾರತಿ ಛಾಯಾಗ್ರಹಣ, ಸುರ್ ಜೋಯಿಸ್ ಸಂಗೀತ ನಿರ್ದೇಶನ ಹಾಗೂ ನಾಗೇಂದ್ರ ಉಜ್ಜನಿ ಸಂಕಲನವಿದೆ.