

ಹೈದರಾಬಾದ್: ತೆಲಂಗಾಣವನ್ನೇ ಬೆಚ್ಚಿಬೀಳಿಸಿದ್ದ 2018ರ ಸೆಪ್ಟೆಂಬರ್ನಲ್ಲಿ ನಡೆದಿದ್ದ ಮರ್ಯಾದೆ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿ ರಾವ್, ಭಾನುವಾರ ಹೈದರಾಬಾದ್ ಹೊಟೆಲ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದರು. ನಿನ್ನೆಯಷ್ಟೇ ಅವರ ಅಂತ್ಯಕ್ರಿಯೆಯೂ ನೆರವೇರಿತು.
ಮರ್ಯಾದೆ ಹತ್ಯೆಯಿಂದ ಸಾಕಷ್ಟು ಸುದ್ದಿಯಾದ ಮಾರುತಿ ರಾವ್ ಹುಟ್ಟಿನಿಂದಲೇ ಶ್ರೀಮಂತ ವ್ಯಕ್ತಿಯೇನಲ್ಲ. ಮಧ್ಯಮ ಕುಟುಂಬದಲ್ಲಿ ಹುಟ್ಟಿದ ರಾವ್, ಬೆಳೆಯುತ್ತಾ ಆತನನ್ನು ನೋಡಿ ಹೊಟ್ಟೆಕಿಚ್ಚು ಪಡುವಷ್ಟು ಹಣ ಸಂಪಾದಿಸಿದ್ದ. ಕಿರಾಣಿ ವ್ಯಾಪಾರಿಯಾಗಿ ವೃತ್ತಿ ಪ್ರಾರಂಭಿಸಿದ. ಬಳಿಕ ರೈಸ್ ಮಿಲ್ ವ್ಯವಹಾರ ಪ್ರವೇಶಿಸಿ, ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ತೊಡಗಿಕೊಂಡಿದ್ದ. ಅಲ್ಲಿಂದಾಚೆಗೆ ಹಿಂದೆ ತಿರುಗಿ ನೋಡದ ರಾವ್ ಬಹುಬೇಗನೇ ಕೋಟ್ಯಾಧೀಶ್ವರನಾಗಿಬಿಟ್ಟಿದ್ದ. ಸುಮಾರು 200 ಕೋಟಿ ರೂ. ಒಡೆಯನಾಗಿದ್ದ.
ಮಿರಿಯಾಲಗುಡ ಮಾರುತಿ ರಾವ್ ಎಂದೇ ಪರಿಚಿತನಾಗಿದ್ದ. ಅನೇಕರು ಆತನ ಆಸ್ತಿಯ ಬಗ್ಗೆ ಕೇಳಿದ್ದಾರೆ. ಆದರೆ, ಕೆಲವರು ಹೇಳುವ ಪ್ರಕಾರ ಆತನ ಆಸ್ತಿ 200 ಕೋಟಿಗಿಂತಲೂ ಹೆಚ್ಚಿತ್ತು ಎಂದಿದ್ದಾರೆ.
ಅಂದಹಾಗೆ ರಾವ್ ತನ್ನ ಮಗಳನ್ನು ಮದುವೆಯಾಗಿದ್ದ ಪೆರುಮಾಳ ಪ್ರಣಯ್ ಎಂಬಾತನ ಕೊಲೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. 2018ರಲ್ಲಿ ಈ ಘಟನೆ ನಡೆದಿತ್ತು. ಆದರೆ, ಕಳೆದ ಭಾನುವಾರ ಹೈದರಾಬಾದಿನ ಆರ್ಯ ವೈಶ್ಯ ಭವನದಲ್ಲಿ ರಾವ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರವಷ್ಟೇ ಮಿರಿಯಲಗುಡದಲ್ಲಿ ನಡೆದಿದೆ. ಪ್ರಣಯ್ ಕೊಲೆಗೆ ಸಂಬಂಧಿಸಿದಂತೆ ನಿರಂತರ ವಿಚಾರಣೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು ಕೂಡ ಇತ್ತೀಚೆಗಷ್ಟೇ ರಾವ್ ಆಸ್ತಿ ವಿವರಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ರಾವ್ ಆಸ್ತಿ ಮೌಲ್ಯ ಪ್ರಸ್ತುತ 200 ಕೋಟಿ ರೂ. ಇದೆ. 15 ವರ್ಷಗಳ ಹಿಂದೆ ರೈಸ್ ಮಿಲ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸಿದ್ದಾಗಿ ರಾವ್ ತನಿಖಾ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಮಿರಿಯಲಗುಡದಲ್ಲಿ ಅಮೃತಾ ಹೆಸರಿನಲ್ಲಿ 100 ಬೆಡ್ ವ್ಯವಸ್ಥೆಯುಳ್ಳ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಪತ್ನಿ ಗಿರಿಜಾ ಹೆಸರಿನಲ್ಲಿ ಮಿರಿಯಲಗುಡದಲ್ಲಿ 10 ಎಕರೆ ಭೂಮಿಯು ಕೂಡ ಇರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಮಿರಿಯಲಗುಡ ಬೈಪಾಸ್ ರಸ್ತೆಯಲ್ಲಿ 22 ಸೈಟ್ಗಳಿವೆ. ತಾಯಿ ಹೆಸರಿನಲ್ಲಿ ಶಾಪಿಂಗ್ ಮಾಲ್, ಹೊಸಪೇಟೆಯಲ್ಲಿ 400 ಯಾರ್ಡ್ ಪ್ಲಾಟ್ ಹಾಗೂ ಹೈದರಾಬಾದಿನಲ್ಲಿ 5 ಅಪಾರ್ಟ್ಮೆಂಟ್ಗಳಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಬೇನಾಮಿ ಆಸ್ತಿಯು ಇದೆ ಎನ್ನಲಾಗಿದೆ.
ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದ ವೇಳೆ ಡೆತ್ನೋಟ್ ಕೂಡ ಪತ್ತೆಯಾಗಿತ್ತು. ಅದರಲ್ಲಿ ಪತ್ನಿ ಕುರಿತು ಕ್ಷಮಿಸು ಗಿರಿಜಾ ಎಂತಲೂ ಮಗಳ ಬಗ್ಗೆ ಅಮೃತಾ ಅಮ್ಮನ ಬಳಿ ಹೋಗು ಎಂದು ಬರೆಯಲಾಗಿತ್ತು. ಇನ್ನು ಸೋಮವಾರ ನಡೆದ ಅಂತ್ಯಕ್ರಿಯೆಗೆ ಅಮೃತಾ ಹೋಗಿದ್ದಾಗ ಸಂಬಂಧಿಕರು ಆಕೆಯನ್ನು ನೋಡಿ ಅಮೃತಾ ಗೋ ಬ್ಯಾಕ್ ಎಂಬ ಆಕ್ರೋಶ ಘೋಷಣೆ ಕೂಗಿದ್ದರು. ಇದರಿಂದ ಅಮೃತಾಗೂ ಮುಜುಗರ ಉಂಟಾಗಿತ್ತು. ಇದೀಗ ರಾವ್ ಮರಣ ಹೊಂದಿದ್ದು, ಅವರ ಆಸ್ತಿಯು ಚರ್ಚೆಯ ವಿಷಯವಾಗಿದೆ.
ಘಟನೆ ಹಿನ್ನೆಲೆ
ದಲಿತ ಸಮುದಾಯದವನಾಗಿದ್ದ ಪ್ರಣಯ್ ಮತ್ತು ವೈಶ್ಯ ಸಮುದಾಯವಳಾಗಿದ್ದ ಅಮೃತಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇದಕ್ಕೆ ಅಮೃತಾ ತಂದೆ ರಾವ್ ಒಪ್ಪಿರಲಿಲ್ಲ. ಬಳಿಕ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದರು ಎಂಬ ಆರೋಪವಿದೆ. ಸೆಪ್ಟೆಂಬರ್ 14, 2018ರಂದು ಗರ್ಭಿಣಿ ಪತ್ನಿ ಅಮೃತಾ ಮುಂದೆಯೇ ಪ್ರಣಯ್ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಆಸ್ಪತ್ರೆಯನ್ನು ಬಿಟ್ಟು ಬರುವಾಗ ಕೊಲೆ ಮಾಡಲಾಗಿತ್ತು. ಈ ಎಲ್ಲ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅಂದಿನಿಂದ ಪ್ರಕರಣ ತನಿಖೆ ನಡೆಯುತ್ತಲೇ ಇದೆ. (ಏಜೆನ್ಸೀಸ್)