

ತಿ.ನರಸೀಪುರ: ತಾಲೂಕಿನ ಮಾದಾಪುರ ಗ್ರಾಮದ ಶ್ರೀಮರುಡೇಶ್ವರಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಅಂಗವಾಗಿ ಸೋಮವಾರ ಮರುಡೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಸೋಮವಾರ ಬೆಳಗಿನ ಜಾವ ದೇವರನ್ನು ಹೂವಿನಿಂದ ಅಲಂಕರಿಸಿ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ವಿವಿಧ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಪ್ರಧಾನ ಅರ್ಚಕ ಮಂಜು ಅವರು ಸ್ವಾಮಿಗೆ ರುದ್ರಾಭಿಷೇಕ ಪೂಜೆ ನೆರವೇರಿಸಿದರು. ನಂತರ ಗಣೇಶ, ಸುಬ್ರಹ್ಮಣ್ಯ ಹಾಗೂ ಮರುಡೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮಾದಾಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನೆರವೇರಿಸಿದ ನಂತರ ಉತ್ಸವ ಮೂರ್ತಿಯನ್ನು ಸಿಂಗರಿಸಿದ ರಥದಲ್ಲಿ ಕೂರಿಸಿ ದೇವಸ್ಥಾನದ ಮುಂಭಾಗದಲ್ಲಿ ರಥೋತ್ಸವಕ್ಕೆ ಉಪ ತಹಸೀಲ್ದಾರ್ ಕುಮಾರ್ ಹಾಗೂ ಗ್ರಾಮದ ಮುಖಂಡರು ಚಾಲನೆ ನೀಡಿದರು.
ನಂತರ ರಥವು ದೇವಸ್ಥಾನದ ಸುತ್ತ ಸಾಗಿ ನಂತರ ಸ್ವಸ್ಥಾನ ತಲುಪಿತು. ಭಕ್ತರು ದೇವರ ದರ್ಶನ ಪಡೆದು ರಥಕ್ಕೆ ಹಣ್ಣು ಧವನ ಎಸೆದು ಭಕ್ತಿ ಭಾವ ಮೆರೆದರು.
ಸುತ್ತಮುತ್ತಲ ಗ್ರಾಮಗಳಾದ ಚನ್ನಬಸವಯ್ಯನಹುಂಡಿ, ನಿಲಸೋಗೆ, ಮರಡಿಪುರ, ದೊಡ್ಡನಹುಂಡಿ, ಶಂಭುದೇವನಪುರ, ಜಾಲಹಳ್ಳಿ, ಕಟ್ಟೇಪುರ ಮತ್ತಿತರ ಗ್ರಾಮಗಳ ಭಕ್ತರು ಬೆಳಗ್ಗೆಯಿಂದಲೇ ಉಪವಾಸವಿದ್ದು ಹುತ್ತಕ್ಕೆ ಹಾಲೆರೆದು ನಂತರ ರಥೋತ್ಸವವನ್ನು ಕಣ್ತುಂಬಿಕೊಂಡರು.
ದೇವಸ್ಥಾನದ ವತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರ ಬಿಗಿ ಭದ್ರತೆ ನಿಯೋಜಿಸಲಾಗಿತ್ತು.