

ನವದೆಹಲಿ: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿ ನಿಕಿತಾ ಕೌಲ್ ಭಾರತೀಯ ಸೇನೆಗೆ ಅಧಿಕೃತವಾಗಿ ನಿಯೋಜನೆಗೊಂಡಿದ್ದಾರೆ. ಈ ಮೂಲಕ ಪತಿಯಂತೆ ತಾವೂ ದೇಶಸೇವೆಗೆ ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಚೆನೈನಲ್ಲಿರುವ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯಲ್ಲಿ ನಿಕಿತಾ ಕೌಲ್ ಅವರ ಭುಜದ ಮೇಲೆ ಸ್ಟಾರ್ಗಳನ್ನು ಅಳವಡಿಸುವ ಮೂಲಕ ಸೇನೆಗೆ ಬರಮಾಡಿಕೊಳ್ಳಲಾಯಿತು. ನಾರ್ಥರ್ನ್ ಕಮಾಂಡ್ನ ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಶಿ ಅವರು ಲೆಫ್ಟಿನೆಂಟ್ ನಿಕಿತಾಗೆ ಈ ಗೌರವ ಪ್ರದಾನ ಮಾಡಿದರು.
2019ರಲ್ಲಿ ಜೈಶ್-ಎ-ಮಹಮ್ಮದ್ ಸಂಘಟನೆಯ ಉಗ್ರಗಾಮಿಗಳ ಪುಲ್ವಾಮದಲ್ಲಿ ದಾಳಿ ಮಾಡಿದ್ದರಿಂದ ಸಿಆರ್ಪಿಎಫ್ನ 40 ಯೋಧರು ಹುತಾತ್ಮರಾಗಿದ್ದರು. ಇವರಲ್ಲಿ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಕೂಡ ಒಬ್ಬರು.