

ಬ್ಯಾಂಕಾಕ್: ಆತಂಕಕಾರಿ ಘಟನೆಯೊಂದರಲ್ಲಿ ಚೀನಾದ ಯುವ ದಂಪತಿಯ ಕೈಕಾಲು ಕಟ್ಟಿ ಜೀವಂತವಾಗಿ ಸೂಟ್ಕೇಸ್ ಒಳಗಡೆ ಹಾಕಿ ನದಿಗೆ ಎಸೆದಿರುವುದಾಗಿ ಥಾಯ್ಲೆಂಡ್ ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಥಾಯ್ಲೆಂಡ್ನ ಕಂಪೇಂಗ್ ಫೆಟ್ನಲ್ಲಿರುವ ಪಿಂಗ್ ನದಿಯಲ್ಲಿ ತೇಲುತ್ತಿದ್ದ ಕಪ್ಪು ಬಣ್ಣದ ಸೂಟ್ಕೇಸ್ನಲ್ಲಿ ಮಂಗಳವಾರ ಮಧ್ಯಾಹ್ನ ವ್ಯಕ್ತಿಯ ದೇಹವೊಂದು ಪತ್ತೆಯಾಗಿದ್ದು, ಮೃತನನ್ನು ವಾಂಗ್ ಜುನ್ ಎಂದು ಗುರುತಿಸಲಾಗಿದೆ. ಕೊಲೆ ಎಂದು ಶಂಕಿಸಲಾಗಿದ್ದು, ವಾಂಗ್ ಜುನ್ ಪತ್ನಿ ಜುಹಾ ಬಿಂಗ್(28) ಕೂಡ ಸಾವಿಗೀಡಾಗಿದ್ದಾಳೆ ಎಂದು ತಿಳಿದುಬಂದಿದೆ. ಆಕೆಯ ದೇಹಕ್ಕಾಗಿ ಪೊಲೀಸರು ಶೋಧಕಾರ್ಯ ಕೈಗೊಂಡಿದ್ದಾರೆ. ಮತ್ತೊಂದು ಸೂಟ್ಕೇಸ್ನಲ್ಲಿ ಆಕೆಯನ್ನು ನೀರಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಮೃತ ದಂಪತಿಯು ಇತರೆ 13 ಚೀನಾದ ಪ್ರವಾಸಿಗರೊಂದಿಗೆ ಫೆ. 12ರಂದು ಬ್ಯಾಂಕಾಕ್ಗೆ ಆಗಮಿಸಿದ್ದರು. ಬಳಿಕ ಪಟ್ಟಾಯದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ವಾಸವಿದ್ದರು. ಪ್ರವಾಸಕ್ಕೆ ಮುಗಿಸಿ ಇನ್ನುಳಿದ ಚೀನಾ ಪ್ರವಾಸಿಗರು ಈಗಾಗಲೇ ತವರಿಗೆ ಮರಳಿದ್ದಾರೆ. ಆದರೆ, ದಂಪತಿ ಮಾತ್ರ ಹಿಂದಿರುಗಿರಲಿಲ್ಲ. ಹೀಗಾಗಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಮೀನುಗಾರ ಸೌಥನ್ ಥಾಪ್ತನ್ ಎಂಬಾತ ಮೀನು ಹಿಡಿಯಲು ನದಿಗೆ ಇಳಿದಿದ್ದಾಗ ಸೂಟ್ಕೇಸ್ ನೋಡಿದ್ದಾನೆ. ಬಳಿಕ ಅದರಿಂದ ಬರುವ ವಾಸನೆಯನ್ನು ನೋಡಿ ಕೊಳೆತ ಮೀನುಗಳು ಇರಬಹುದೆಂದು ತೆಗೆದು ನೋಡಿದಾಗ ಒಳಗಡೆ ವ್ಯಕ್ತಿಯೊಬ್ಬನನ್ನು ಕೆಂಪು ವೈರ್ನಿಂದ ಕಟ್ಟಿ ಸುರುಳಿಯಾಕಾರದಲ್ಲಿ ಮಲಗಿಸಲಾಗಿತ್ತು. ಅದನ್ನು ನೋಡಿ ನನಗೆ ಭಯವಾಯಿತು ಎಂದು ಹೇಳಿಕೊಂಡಿದ್ದಾನೆ. ತಕ್ಷಣ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾನೆ.
ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಥಾಯ್ಲೆಂಡ್ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಈಗಾಗಲೇ ಎರಡು ಬಂಧನ ವಾರೆಂಟ್ ಸಿದ್ಧ ಮಾಡಿಕೊಂಡಿದ್ದಾರೆ. ನದಿಗೆ ಸೂಟ್ಕೇಸ್ಗಳನ್ನು ಎಸೆದಿರುವುದನ್ನು ನೋಡಿದ್ದಾಗಿ ಚಾಲಕನೊಬ್ಬ ಪೊಲೀಸರಿಗೆ ತಿಳಿಸಿದ್ದಾನೆ. ಅಲ್ಲದೆ, ಸ್ಥಳೀಯ ಗ್ರಾಮಸ್ಥರು ಕೂಡ ನದಿಗೆ ಭಾರಿ ಗಾತ್ರ ವಸ್ತುವನ್ನು ಎಸೆದ ಸದ್ದು ಕೇಳಿದ್ದಾಗಿ ಹೇಳಿಕೆ ನೀಡಿದ್ದಾರೆ. ಶವಪರೀಕ್ಷೆಯಲ್ಲೂ ಸಂತ್ರಸ್ತರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಸೂಟ್ಕೇಸ್ನಲ್ಲಿರುವಾಗ ಅವರು ಬದುಕಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಗ್ರಾಮಸ್ಥರನ್ನು ತನಿಖೆ ನಡೆಸಿದಾಗ ಕಳೆದ ಸೋಮವಾರ ಕಾರೊಂದು ಇಲ್ಲಿ ಸುಳಿದಾಡುತ್ತಿತ್ತು. ಅದಾದ ಕೆಲವೇ ಕ್ಷಣಗಳಲ್ಲಿ ಪಕ್ಕದ ನದಿಯಿಂದ ಭಾರಿ ಗಾತ್ರದ ವಸ್ತುಗಳನ್ನು ಎಸೆದಂತೆ ಶಬ್ಧವಾಯಿತು ಎಂದಿದ್ದಾರೆ.
ಪೊಲೀಸರು ಚಾಲಕನನ್ನು ಪತ್ತೆ ಹಚ್ಚಿ, ದಂಪತಿ ಚಲನಾವಲನವನ್ನು ತಿಳಿಯಲು ಅವರು ತಂಗಿದ್ದ ಮನೆಗೆ ಕರೆದುಕೊಂಡು ಹೋದಾಗ ಅಲ್ಲಿ ರಕ್ತದ ಕಲೆಗಳು ಮತ್ತು ಗಲಾಟೆ ನಡೆದಿರುವ ಸುಳಿವು ದೊರೆತಿದೆ. ಚಾಲಕನನ್ನು ವಿಚಾರಿಸಿದಾಗ ಆತನ ಪ್ರಯಾಣಿಕರು ನಾಲ್ಕು ಬ್ಯಾಗ್ಗಳನ್ನು ಮೂರು ವಿವಿಧ ಸ್ಥಳಗಳಲ್ಲಿ ನದಿಗೆ ಎಸೆದರು ಎಂದು ಬಾಯ್ಬಿಟ್ಟಿದ್ದಾನೆ. ಕಾರು ಕಂಪನಿ ಮೂಲಕ ಅವರನ್ನು ಸಂಪರ್ಕಿಸಿದ್ದಾಗಿ ಚಾಲಕ ಹೇಳಿದ್ದಾನೆ.
ಸದ್ಯ ಚಾಲಕನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ರಕ್ತದ ಕಲೆ, ಬೆರಳಚ್ಚು ಹಾಗೂ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಂದಾಜು ನಾಲ್ವರು ಕೊಲೆಯಲ್ಲಿ ಭಾಗಿಯಾಗಿದ್ದಾರೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತನ ಪತ್ನಿಯು ಕೊಲೆಯಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)