'ಮದುವೆ ಎಂದರೆ ಸ್ವಾತಂತ್ರ್ಯವಲ್ಲ ಒಗ್ಗಟ್ಟು'; ದೂರವಾದ ದಂಪತಿಗೆ ಸುಪ್ರೀಂ ಕೋರ್ಟ್‌ ಸೂಚನೆ| supreme court

Supreme Court 13,08,2025
Published on

ನವದೆಹಲಿ: ನಿರಂತರ ದಾಂಪತ್ಯದಲ್ಲಿ ಪತಿ ಅಥವಾ ಪತ್ನಿ ತಮ್ಮ ಸಂಗಾತಿಯಿಂದ ಸ್ವತಂತ್ರವಾಗಿರಲು ಬಯಸುತ್ತಾರೆ ಎಂದು ಹೇಳುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಇಂದು (ಆ.21) ತಿಳಿಸಿದೆ. ಯಾರಾದರೂ ಸ್ವತಂತ್ರರಾಗಿರಲು ಬಯಸಿದರೆ, ಅವರು ದಾಂಪತ್ಯಕ್ಕೆ ಪ್ರವೇಶಿಸಬಾರದು ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠ ಎಚ್ಚರಿಸಿದೆ.

ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ದೂರವಾಗಿರುವ ದಂಪತಿಗಳ ನಡುವಿನ ವಿವಾದದ ವಿಚಾರಣೆಯ ಸಂದರ್ಭದಲ್ಲಿ ಈ ರೀತಿಯಾಗಿ ಪ್ರತಿಕ್ರಿಯೆ ನೀಡಲಾಗಿದೆ. ಸಿಂಗಾಪುರದಲ್ಲಿ ಕೆಲಸ ಮಾಡುವ ಪತಿ ಪ್ರಸ್ತುತ ಭಾರತದಲ್ಲಿದ್ದಾರೆ, ಆದರೆ ಪತ್ನಿ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಪತ್ನಿ, ತನ್ನ ಪತಿಗೆ ಸಮನ್ವಯಕ್ಕಿಂತ ಹೆಚ್ಚಾಗಿ ಕಸ್ಟಡಿ ಮತ್ತು ಭೇಟಿಯಲ್ಲಿ ಮಾತ್ರ ಆಸಕ್ತಿ ಇದೆ ಎಂದು ವಾದಿಸಿದರು. ತನಗೆ ಯಾವುದೇ ಜೀವನಾಂಶ ಸಿಕ್ಕಿಲ್ಲ, ಇದರಿಂದಾಗಿ ಒಂಟಿ ತಾಯಿಯಾಗಿ ಜೀವನ ಕಷ್ಟಕರವಾಗಿದೆ ಎಂದು ಅವರು ಹೇಳಿಕೊಂಡರು.

ವಿವಾಹ ಮತ್ತು ಅನ್ಯೋನ್ಯತೆ ಕುರಿತು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಮದುವೆ ಎಂದರೆ ಎರಡು ಆತ್ಮಗಳು, ವ್ಯಕ್ತಿಗಳು ಸೇರುವುದಾಗಿದೆ. ಹಾಗಾಗಿ ಪತಿ ಅಥವಾ ಪತ್ನಿ ಸಂಪೂರ್ಣ ಸ್ವಾತಂತ್ರ್ಯ ಪಡೆಯುವುದು ಅಸಾಧ್ಯ ಎಂದು ತಿಳಿಸಿದೆ.

ಮಧ್ಯಂತರ ಒಪ್ಪಂದವಾಗಿ, ಆಗಸ್ಟ್‌ ವಾರಾಂತ್ಯದಲ್ಲಿ ಮಕ್ಕಳ ಪಾಲನೆಯನ್ನು ತಂದೆಗೆ ವಹಿಸಲು ಪೀಠವು ಆದೇಶಿಸಿತು. ಅಲ್ಲದೆ ತನ್ನ ಕಿರಿಯ ಮಗನ ಹುಟ್ಟುಹಬ್ಬವನ್ನು ಮಕ್ಕಳೊಂದಿಗೆ ಆಚರಿಸಲು ಅನುಮತಿ ನೀಡಿತು ಮತ್ತು ಅದೇ ಸಂಜೆ ಅವರನ್ನು ಅವರ ತಾಯಿಯ ಮನೆಗೆ ಹಿಂತಿರುಗಿಸುವಂತೆ ಸೂಚಿಸಿತು.

ಕಕ್ಷಿದಾರರು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ಕೇಳಿಕೊಂಡ ಪೀಠ, ಪ್ರತಿಯೊಬ್ಬ ಪತಿ-ಪತ್ನಿಯರ ನಡುವೆ ಒಂದಲ್ಲ ಒಂದು ವಿವಾದ ಇರುತ್ತದೆ. ನಾವು ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ. ಹಾಗಾದರೆ ನೀವು ಯಾಕೆ ಮದುವೆಯಾದಿರಿ. ಯಾವುದೇ ಹೆಂಡತಿ ತನ್ನ ಗಂಡನ ಮೇಲೆ ಅವಲಂಬಿತವಾಗಲು ಬಯಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net