ಇನ್ಮುಂದೆ ಪಾಸ್​ಪೋರ್ಟ್​ನಲ್ಲಿ ಹೆಂಡತಿ ಹೆಸರು ಸೇರಿಸಲು ವಿವಾಹ ಪ್ರಮಾಣ ಪತ್ರ ಬೇಕಿಲ್ಲ; ಬದಲಿಗೆ ಇನ್ನೇನಿರಬೇಕು|airport

Passport
Published on

airport | ಪಾಸ್‌ಪೋರ್ಟ್‌ಗಳಿಗೆ ಸಂಬಂಧಿಸಿದಂತೆ ನಿಯಮವೊಂದರಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಇನ್ನುಮುಂದೆ ನಿಮ್ಮ ಪಾಸ್‌ಪೋರ್ಟ್‌ಗೆ ನಿಮ್ಮ ಸಂಗಾತಿಯ ಹೆಸರನ್ನು ಸೇರಿಸಲು ವಿವಾಹ ಪ್ರಮಾಣ ಪತ್ರ ಬೇಕಾಗುವುದಿಲ್ಲ. ಬದಲಿಗೆ ನೀವು ಹೊಸ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ. ಹಾಗಾದರೆ ಈ ಹೊಸ ನಿಯಮ ಏನು ಎಂಬುದನ್ನು ತಿಳಿಯೋಣ.

ಪಾಸ್‌ಪೋರ್ಟ್‌ಗಳಿಗೆ ಸಂಬಂಧಿಸಿದ ಭಾರತೀಯ ವಿದೇಶಾಂಗ ಸಚಿವಾಲಯವು ಅನುಬಂಧ-ಜೆ ನಿಯಮವನ್ನು ಜಾರಿಗೆ ತಂದಿದೆ. ಪಾಸ್‌ಪೋರ್ಟ್‌ನಲ್ಲಿ ಪತಿ ಅಥವಾ ಪತ್ನಿಯ ಹೆಸರನ್ನು ಬದಲಾಯಿಸಲು ವಿವಾಹ ಪ್ರಮಾಣಪತ್ರದ ಅಗತ್ಯವನ್ನು ರದ್ದುಗೊಳಿಸಿದೆ. ಈ ನಿಯಮದ ಪ್ರಕಾರ, ಈಗ ಪಾಸ್‌ಪೋರ್ಟ್‌ನಲ್ಲಿ ಪತಿ ಅಥವಾ ಪತ್ನಿಯ ಹೆಸರನ್ನು ಬದಲಾಯಿಸಲು ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.

ಪತಿ ಮತ್ತು ಪತ್ನಿಯೊಂದಿಗೆ ಇರುವ ಫೋಟೋ ಜೊತೆಗೆ ಅಫಿಡವಿಟ್ ಅನ್ನು ಸಲ್ಲಿಸುವ ಮೂಲಕ ತಮ್ಮ ಹೆಸರುಗಳನ್ನು ಸೇರಿಸಬೇಕಾಗಿರುತ್ತದೆ. ಪಾಸ್‌ಪೋರ್ಟ್‌ಗೆ ಸಂಗಾತಿಯ ಹೆಸರನ್ನು ಸೇರಿಸಲು ಇನ್ನುಮುಂದೆ ವಿವಾಹ ಪ್ರಮಾಣಪತ್ರವನ್ನು ಒದಗಿಸುವ ಹಾಗಿಲ್ಲ. ಬದಲಿಗೆ ಜಂಟಿ ಫೋಟೋ ಮತ್ತು ಅಫಿಡವಿಟ್ ನೀಡುವ ಮೂಲಕ, ಪತಿ ಅಥವಾ ಪತ್ನಿಯ ಹೆಸರನ್ನು ಪಾಸ್‌ಪೋರ್ಟ್‌ಗೆ ಸೇರಿಸಲಾಗುತ್ತದೆ. ಈ ಅಫಿಡವಿಟ್‌ಗೆ ಪತಿ ಮತ್ತು ಪತ್ನಿ ಇಬ್ಬರ ಜೊತೆಗಿನ ಸಹಿಯೂ ಅಗತ್ಯವಾಗಿರುತ್ತದೆ.

ಹಿಂದೆ ಇದ್ದ ನಿಯಮವೇನು?

ಪಾಸ್‌ಪೋರ್ಟ್ ಪಡೆಯಲು, ಒಬ್ಬ ವ್ಯಕ್ತಿಯು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಪಾಸ್‌ಪೋರ್ಟ್ ಮಾಡಲು 1500 ರಿಂದ 2000 ರೂಪಾಯಿಗಳು ಶುಲ್ಕ ತಗುಲುತ್ತದೆ. ತುರ್ತು ಪಾಸ್‌ಪೋರ್ಟ್ ಪಡೆಯಲು ನೀವು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಈ ಹಿಂದೆ ಪಾಸ್‌ಪೋರ್ಟ್‌ನಲ್ಲಿ ಗಂಡ ಅಥವಾ ಹೆಂಡತಿಯ ಹೆಸರನ್ನು ಸೇರಿಸಲು ದೀರ್ಘ ಪ್ರಕ್ರಿಯೆಯನ್ನು ಅನುಸರಿಸಬೇಕಾಗಿತ್ತು. ಮದುವೆ ಪ್ರಮಾಣಪತ್ರವನ್ನು ಹಾಜರುಪಡಿಸಬೇಕಾಗಿತ್ತು. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ, ಗಂಡ ಮತ್ತು ಹೆಂಡತಿಗೆ ಕೆಲಸಕ್ಕಾಗಿ ಅಥವಾ ಇನ್ನಾವುದೇ ಕಾರಣಕ್ಕಾಗಿ ವಿದೇಶಕ್ಕೆ ಹೋಗಲು ಪಾಸ್‌ಪೋರ್ಟ್ ಅಗತ್ಯವಿದ್ದರೆ, ಅವರು ತೊಂದರೆಗಳನ್ನು ಎದುರಿಸಬೇಕಾಗಿರುತ್ತಿತ್ತು, ಆದರೆ ಈ ಹೊಸ ನಿಯಮದಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net