ವಿವಾಹ ಉದ್ದೇಶಕ್ಕೆ ಮತಾಂತರ ಸರಿಯಲ್ಲ ಎಂದ ಕೋರ್ಟ್​

Indian-Wedding
Published on

ಲಖನೌ: ಮದುವೆಯ ಕಾರಣಕ್ಕಾಗಿ ಮತಾಂತರವಾಗುವುದು ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈ ಕೋರ್ಟ್ ಹೇಳಿದೆ. ಮತಾಂತರಗೊಂಡು ಮದುವೆಯಾಗಿದ್ದ ದಂಪತಿ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಉತ್ತರ ಪ್ರದೇಶದ ಮುಜಾಫರ್ ನಗರದ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಇತ್ತೀಚೆಗೆ ಮದುವೆಯಾಗಿದ್ದರು. ಮದುವೆಗೆ ಒಂದು ತಿಂಗಳಿರುವಾಗ ಯುವತಿ ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದಳು. ಕುಟುಂಬದಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಮೂರು ತಿಂಗಳ ಕಾಲ ಪೊಲೀಸ್ ರಕ್ಷಣೆ ನೀಡುವಂತೆ ದಂಪತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಹಸ್ತಕ್ಷೇಪ ಮಾಡದಿರುವಂತೆ ಕುಟುಂಬಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಅವರ ನ್ಯಾಯಪೀಠ ಅರ್ಜಿಯನ್ನು ತಿರಸ್ಕರಿಸಿದೆ.

‘ಪ್ರಿಯಾಂಶಿ ಅಲಿಯಾಸ್ ಸಮ್ರೀನ್, ಮುಸ್ಲಿಂ ಧರ್ಮದ ಯುವತಿಯಾಗಿದ್ದು, 2020ರ ಜೂನ್ 29ರಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅದಾದ ಒಂದು ತಿಂಗಳ ಬಳಿಕ, ಅಂದರೆ ಜುಲೈ 31ರಂದು ಹಿಂದೂ ಧರ್ಮದ ಯುವಕನೊಂದಿಗೆ ಮದುವೆಯಾಗಿದ್ದಾರೆ. ಇಲ್ಲಿ ಮದುವೆಯ ಕಾರಣಕ್ಕೆ ಮತಾಂತರವಾಗಿರುವುದು ಸ್ಪಷ್ಟವಿದೆ. ಇದು ಸ್ವೀಕಾರಾರ್ಹವಲ್ಲ’ ಎಂದು ನ್ಯಾಯಾಲಯ ತಿಳಿಸಿದೆ.

ಈ ಹಿಂದೆ 2014ರಲ್ಲಿಯೂ ಇಂಥದ್ದೇ ಒಂದು ಪ್ರಕರಣ ಅಲಹಾಬಾದ್​ನ ಹೈಕೋರ್ಟ್​ನಲ್ಲಿ ವಿಚಾರಣೆಯಾಗಿತ್ತು. ಹಿಂದೂ ಯುವತಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ಆ ಪ್ರಕರಣದಲ್ಲಿಯೂ ನ್ಯಾಯಾಲಯ ಇದೇ ತೀರ್ಪನ್ನು ನೀಡಿತ್ತು.

ಯೋಗಿ ಆದಿತ್ಯನಾಥ ಎಚ್ಚರಿಕೆ: ಉತ್ತರ ಪ್ರದೇಶದಲ್ಲಿ ಲವ್ ಜಿಹಾದನ್ನು ಸಂಪೂರ್ಣವಾಗಿ ತಡೆಗಟ್ಟುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಅಲಹಾಬಾದ್ ಹೈಕೋರ್ಟ್ ತೀರ್ಪಿನ ಬಗ್ಗೆ ಮಾತನಾಡಿರುವ ಅವರು, ‘ಮದುವೆಗೆ ಮತಾಂತರ ಅಗತ್ಯವಲ್ಲ ಎಂದು ನ್ಯಾಯಾಲಯವೇ ಹೇಳಿದೆ. ನಮ್ಮ ಹೆಣ್ಣು ಮಕ್ಕಳ ರಕ್ಷಣೆಗೆ ನಾವು ಸಿದ್ಧವಿದ್ದೇವೆ. ಅದಕ್ಕಾಗಿ ಕಾನೂನನ್ನು ತರುತ್ತೇವೆ. ಗುರುತನ್ನು ಮರೆಮಾಚಿಕೊಂಡು ನಮ್ಮ ಸಹೋದರಿಯರಿಗೆ ಮೋಸ ಮಾಡುತ್ತಿರುವವರಿಗೆ ಇದು ಎಚ್ಚರಿಕೆ’ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net