ಹಗಲು ಗುರುತಿಸಿ ರಾತ್ರಿ ಮನೆಗೆ ಕನ್ನ; ತಾವರೆಕೆರೆ ಪೊಲೀಸರಿಂದ ಕಳ್ಳನಿಗೆ ಕೋಳ

kavare
Published on

ಬೆಂಗಳೂರು: ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ತಾವರೆಕೆರೆ ಪೊಲೀಸರು ಬಂಧಿಸಿ 600 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಮಲ್ಲತ್ತಹಳ್ಳಿ ಎನ್‌ಜಿಇಎ್ ಲೇಔಟ್ ನಿವಾಸಿ ಎಂ.ಬಿ. ಶಿವ ಅಲಿಯಾಸ್ ಶಿವ ರೆಡ್ಡಿ ಬಂಧಿತ. 30 ಲಕ್ಷ ರೂ. ಮೌಲ್ಯದ 600 ಗ್ರಾಂ ಚಿನ್ನಾಭರಣ, ಬೆಳ್ಳಿ ಮತ್ತು ಬೈಕ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಚೇಲೂರು ಗ್ರಾಮದ ಶಿವ ರೆಡ್ಡಿ, ಮಲ್ಲತ್ತಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಜನವಸತಿ ಪ್ರದೇಶದಲ್ಲಿ ಬೈಕ್‌ನಲ್ಲಿ ಓಡಾಡಿಕೊಂಡು ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಸಂಜೆ ಅಥವಾ ಬೆಳಗಿನ ಜಾವ ಬೀಗ ಒಡೆದು ಚಿನ್ನಾಭರಣ ದೋಚುತ್ತಿದ್ದ. ಕದ್ದ ಚಿನ್ನವನ್ನು ಅಡವಿಟ್ಟ ಮೋಜು-ಮಸ್ತಿ ಮಾಡುತ್ತಿದ್ದ. ತಾವರೆಕೆರೆ ಹೋಬಳಿ ಯಲ್ಲಪ್ಪನಪಾಳ್ಯದಲ್ಲಿ ಮನೆಯೊಂದಲ್ಲಿ ಚಿನ್ನಾಭರಣ ಕಳವು ಮಾಡಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ರಾಮಪ್ಪ ಬಿ. ಗುತ್ತೇರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net