

ಅಲಹಾಬಾದ್: ಪತ್ನಿ 18 ವರ್ಷ ಮೇಲ್ಪಟ್ಟವಳಾಗಿದ್ದರೆ ವೈವಾಹಿಕ ಜೀವನದಲ್ಲಿ ನಡೆಸುವ ಅತ್ಯಾಚಾರ ಭಾರತೀಯ ದಂಡ ಸಂಹಿತೆಯ (ಐಪಿಸಿ) ಪ್ರಕಾರ ಅಪರಾಧವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಪತ್ನಿ ವಿರುದ್ಧ ‘ಅನೈಸರ್ಗಿಕ ಅಪರಾಧ’ ಎಸಗಿದ ಆರೋಪಗಳಿಂದ ಪತಿಯನ್ನು ದೋಷಮುಕ್ತಿಗೊಳಿಸುವ ಸಂದರ್ಭ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಸ್ತಾಪಿತ ಭಾರತೀಯ ನ್ಯಾಯ ಸಂಹಿತೆಯಲ್ಲಿ ಐಪಿಸಿಯ 377ನೇ ಸೆಕ್ಷನ್ನಂಥ ನಿಯಮವಿಲ್ಲ ಎಂದು ಕೂಡ ಆದೇಶ ಪ್ರಕಟಿಸಿದ ನ್ಯಾಯಮೂರ್ತಿ ರಾಮ ಮನೋಹರ್ ನಾರಾಯಣ ಮಿಶ್ರಾರ ಪೀಠ ಹೇಳಿದೆ. ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳು ಇನ್ನೂ ಸುಪ್ರೀಂ ಕೋರ್ಟ್ ಮುಂದೆ ಬಾಕಿಯಿವೆ. ಆದ್ದರಿಂದ ಸವೋನ್ನತ ನ್ಯಾಯಾಲಯ ನಿರ್ಧಾರ ಕೈಗೊಳ್ಳುವವರೆಗೆ ವೈವಾಹಿಕ ಅತ್ಯಾಚಾರಕ್ಕೆ ಯಾವುದೇ ಕ್ರಿಮಿನಲ್ ದಂಡ ಶಿಕ್ಷೆ ವಿಧಿಸಲಾಗದು ಎಂದು ಕೋರ್ಟ್ ಹೇಳಿದೆ.
ಅರ್ಜಿದಾರರ ಆರೋಪ ಏನು?: ತಮ್ಮ ಮದುವೆ ಒಂದು ಅಪವಿತ್ರ ಸಂಬಂಧ ವಾಗಿದೆ ಎಂದು ದೂರುದಾರ ಮಹಿಳೆ ಅರ್ಜಿಯಲ್ಲಿ ಆರೋಪಿಸಿದ್ದಾಳೆ. ಪತಿ ತನ್ನನ್ನು ಮೌಖಿಕ ಹಾಗೂ ದೈಹಿಕ ನಿಂದನೆ ಹಾಗೂ ಬಲವಂತಕ್ಕೆ ಒಳಪಡಿಸಿದ್ದಾನೆ ಎಂಬುದು ಮಹಿಳೆಯ ಆರೋಪವಾಗಿದೆ. ಅಲ್ಲದೆ, ಒಂದು ಫಾರ್ಚುನರ್ ಕಾರ್ ಮತ್ತು 40 ಲಕ್ಷ ರೂಪಾಯಿ ನಗದನ್ನು ಕೊಡುವಂತೆ ಹೇಳಿದ ಪತಿ, ಪೋಷಕರಿಂದ ವರದಕ್ಷಿಣೆ ತರುವಂತೆ ಬಲವಂತ ಪಡಿಸಿದ್ದಾರೆ ಎಂದೂ ಆರೋಪಿಸಿದ್ದಳು.