

ಕುಮಟಾ: ಮಾದಕವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ ಘಟನೆ ತಾಲೂಕಿನ ಮೂರೂರು ರಸ್ತೆಯ ಕಾಗಾಲ ಮಾನೀರ ಬಳಿ ನಡೆದಿದೆ.
ಮೂರೂರು ರಸ್ತೆಯ ಕಾಗಾಲ ಮಾನೀರ ಬಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಪೆಡ್ಲರ್ಗಳ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪಿ.ಎಸ್.ಐ. ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿ ಭಾನುವಾರ ಮಧ್ಯಾಹ್ನ ದಾಳಿ ಮಾಡಿ ಆರೋಪಿತರಾದ ಹೊನ್ನಾವರ ತಾಲೂಕಿನ ರ್ಕ ಕಂಕೋಡಿಯ ನಿವಾಸಿ ದೇವೇಂದ್ರ ಶಂಕರ ಮುಕ್ರಿ(22), ಹೊನ್ನಾವರ ತಾಲೂಕಿನ ಮಾಡಗೇರಿ ನಿವಾಸಿ ಸುಬ್ರಮಣ್ಯ ರಾಮನಾಥ ನಾಯ್ಕ (49), ಹಾಗೂ ಹೊಳೆಗದ್ದೆಯ ದರ್ಶನ ಜನಾರ್ದನ ನಾಯ್ಕ(21) ಅವರನ್ನು ಬಂಧಿಸಿದ್ದಾರೆ. ಅರೋಪಿಗಳಿಂದ 25,000 ರೂ. ಮೌಲ್ಯದ 255 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ 2 ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.
ಸಿಪಿಐ ಯೋಗೇಶ ಕೆ.ಎಂ. ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಗಣೇಶ ನಾಯ್ಕ, ಗುರು ನಾಯಕ, ಕಿರಣ ನಾಯ್ಕ, ಲೋಕೇಶ ಅರಿಶಿಣಗುಪ್ಪಿ, ರವಿ ನಾಯ್ಕ ಕಾರ್ಯಾಚರಣೆಯಲ್ಲಿದ್ದರು.