

ಪಣಜಿ : ಔಷಧ ಉದ್ದೇಶಕ್ಕಾಗಿ ಗಾಂಜಾ ಬೆಳೆಯಲು ಅನುಮತಿ ನೀಡುವ ಪ್ರಸ್ತಾಪಕ್ಕೆ ಗೋವಾ ಸರ್ಕಾರದ ಕಾನೂನು ಇಲಾಖೆ ಅನುಮೋದನೆ ನೀಡಿದೆ. ಆರೋಗ್ಯ ಇಲಾಖೆಯಿಂದಲೂ ಅನುಮತಿ ಪಡೆಯಲಾಗಿದ್ದು, ಔಷಧ ಉದ್ದೇಶಗಳಿಗಾಗಿ ಮಾತ್ರ ಗಾಂಜಾದ ನಿಯಂತ್ರಿತ ಕೃಷಿ ನಡೆಸಲು ಅನುಮತಿಸಲಾಗುತ್ತದೆ.
ನೈಸರ್ಗಿಕ ಔಷಧ ಕಂಪನಿಗಳಿಗೆ ಮಾತ್ರ ಇದನ್ನು ಮಾರಾಟ ಮಾಡಲಾಗುತ್ತದೆ ಎಂದು ಕಾನೂನು ಸಚಿವ ನಿಲೇಶ್ ಕ್ಯಾಬ್ರಾಲ್ ಹೇಳಿದ್ದಾರೆ. ಆದರೆ ಸರ್ಕಾರದ ನಡೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಮಾದಕವಸ್ತುಗಳ ಬಳಕೆ ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿವೆ. ಬಿಜೆಪಿ ಸರ್ಕಾರ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಯುತ್ತಿದೆ ಎಂದು ಗೋವಾ ಕಾಂಗ್ರೆಸ್ ವಕ್ತಾರ ಅಮರನಾಥ್ ಪಂಜಿಕರ್ ಟೀಕಿಸಿದ್ದಾರೆ.
1985ರಲ್ಲಿ ನಾಕೋಟಿಕ್ಸ್ ಡ್ರಗ್ಸ್ ಆಂಡ್ ಸೈಕೋಟ್ರೋಪಿಕ್ ಸಬ್ಸೆ್ಟನ್ಸಸ್ (ಎನ್ಡಿಪಿಎಸ್) ಅಡಿಯಲ್ಲಿ ನಿಷೇಧಿತ ವಸ್ತುಗಳ ಪಟ್ಟಿಗೆ ಗಾಂಜಾವನ್ನು ಸೇರ್ಪಡೆ ಮಾಡಲಾಗಿದೆ.