ವಕೀಲರ ಸಂಘದ ಅಧ್ಯಕ್ಷರಾಗಿ ಮರೀಗೌಡ ಆಯ್ಕೆ

SRP_03-01jpj
ಶ್ರೀರಂಗಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಸಂಜೆ ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎನ್.ಮರೀಗೌಡ, ಉಪಾಧ್ಯಕ್ಷರಾದ ಎನ್.ಕೆ.ಶಿವರಾಮು, ಪ್ರಧಾನ ಕಾರ್ಯದರ್ಶಿ ಸಿ.ಆರ್.ದಿನೇಶ್ ಮತ್ತು ಜಂಟಿಕಾರ್ಯದರ್ಶಿ ಡಿ.ಎಂ.ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳನ್ನು ಸಂಘದ ಸದಸ್ಯರು ಅಭಿನಂದಿಸಿದರು.
Published on

ಶ್ರೀರಂಗಪಟ್ಟಣ : ತಾಲೂಕು ವಕೀಲರ ಸಂಘಕ್ಕೆ ಶುಕ್ರವಾರ ನಡೆದ ಜಿದ್ದಾಜಿದ್ದಿ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎನ್.ಮರೀಗೌಡ ಆಯ್ಕೆಯಾದರು.

ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ಶುಕ್ರವಾರ ಬೆಳಗ್ಗೆ 9 ರಿಂದ ಮಧಾಹ್ನ 2.30ರ ವರೆಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಆಡಳಿತ ಮಂಡಳಿಯ ಒಟ್ಟು 195 ಸದಸ್ಯರಲ್ಲಿ 195 ಮತಗಳು ಚಲಾವಣೆಗೊಂಡಿದ್ದು, ಈ ಪೈಕಿ ಮರೀಗೌಡ 100 ಮತಗಳ ಗಳಿಕೆಯೊಂದಿಗೆ ಎದುರಾಳಿ ಎ.ಟಿ.ಜಯಕುಮಾರ್ ವಿರುದ್ಧ 24 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಾಜಿತಗೊಂಡ ವಕೀಲ ಎ.ಟಿ.ಜಯಕುಮಾರ್ 76 ಹಾಗೂ ಮತ್ತೊಬ್ಬ ಅಭ್ಯರ್ಥಿ ಸಿ.ಎಸ್.ವೆಂಕಟೇಶ್ 18 ಮತಗಳು ಪಡೆದುಕೊಂಡರು. ಇನ್ನು ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಎನ್.ಕೆ.ಶಿವರಾಮು 113 ಮತಗಳು ಪಡೆದಿದ್ದು, ಎದುರಾಳಿ ಕೃಪಾಕರ್ 80 ಮತಗಳಿಸಿ ಪರಾಜಿತರಾದರು. ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಿ.ಆರ್.ದಿನೇಶ್ 112 ಮತಗಳಿಸಿದ್ದು, ಎದುರಾಳಿ ಕೆ.ಎಂ.ಶಂಕರ್ ಶ್ಯಾಮ್ 74 ಮತಗಳಿಸಿ ಪರಾಜಿತರಾದರು. ಅಂತಿಮವಾಗಿ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ 112 ಮತಗಳೊಂದಿಗೆ ಡಿ.ಎಂ.ಮಂಜುನಾಥ್ ಆಯ್ಕೆಯಾಗಿದ್ದು, ಎದುರಾಳಿ ಎಸ್.ಮಂಜುನಾಥ್ 80 ಮತಗಳೊಂದಿಗೆ ಪರಾಭವಗೊಂಡರು.

ಉಳಿದಂತೆ ಖಜಾಂಜಿ ಸ್ಥಾನಕ್ಕೆ ಅವಿರೋಧವಾಗಿ ಜಯಂತಿ ಹಾಗೂ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳಾಗಿ ಕಿರಣ್, ರಾಜೇಶ್, ನಿಂಗಣ್ಣಸ್ವಾಮಿ ಮತ್ತು ಸೌಮ್ಯಶ್ರೀ ನೇಮಕಗೊಂಡರು. ಚುನಾವಣಾಧಿಕಾರಿಯಾಗಿ ಮಂಡ್ಯದ ಟಿ.ಡಿ.ಮಹದೇವು ಕಾರ್ಯನಿರ್ವಹಿಸಿ ಪ್ರಮಾಣ ಪತ್ರ ವಿತರಿಸಿದರು.

ಬಳಿಕ ವಿಜಯ ಸಾಧಿಸಿದ ನೂತನ ಕಾರ್ಯಕಾರಿ ಮಂಡಳಿಯ ಎಲ್ಲ ಪದಾಧಿಕಾರಿಗಳನ್ನು ಸಂಘದ ಸದಸ್ಯರು ಶುಭಕೋರಿದರು.

ಮಾಜಿ ಅಧ್ಯಕ್ಷರುಗಳಾದ ಸಿ.ಮೂರ್ತಿ, ಗಂಗರಾಜು, ಸಿ.ಎಸ್.ಸುಬ್ರಮಣ್ಯ, ಸಿ.ಪುಟ್ಟಸ್ವಾಮಿ, ಮಾಜಿ ಪ್ರಧಾನ ಕಾರ್ಯದರ್ಶಿ ಪವನ್‌ಗೌಡ, ಸಿದ್ದೇಶ್, ಮಾಜಿ ಉಪಾಧ್ಯಕ್ಷ ಕೆ.ಎನ್.ಮಂಜುನಾಥ್, ಬಾಲರಾಜು, ಹಿರಿಯ ವಕೀಲರಾದ ಜಯಸ್ವಾಮಿ, ಶಕ್ತಿಪ್ರಸಾದ್, ಶಿವರಾಜು, ಲಕ್ಷ್ಮಣ್, ಹೇಮಾರಾಧ್ಯ, ಎಂ.ಎನ್.ನಾರಾಯಣಸ್ವಾಮಿ, ಎಂ.ಆರ್.ವಿಶ್ವೇಶ್ವರ ಕುಮಾರ್, ಪುಷ್ಪಲತಾ ಪ್ರೀತಿ, ಅರಕೆರೆ ಸವಿತ, ಇತರರು ಈ ವೇಳೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net