ಸಖತ್​ ಐಡಿಯಾ ಗುರು| ಗಳಿಕೆಗೆ ನೂರೆಂಟು ದಾರಿ

Shruti
Published on

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.

ಗಳಿಕೆಗೆ ನೂರೆಂಟು ದಾರಿ

ಪ್ರವಾಸೋದ್ಯಮ ಎಂದರೆ ಕೇವಲ ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ, ಟೂರಿಸ್ಟ್ ವೆಹಿಕಲ್, ಗೈಡ್, ಮೊಬೈಲ್ ಆಪ್- ವೆಬ್​ಸೈಟ್ ಸೇವೆ ನೀಡುವುದಷ್ಟೇ ಅಲ್ಲ. ಅದರಾಚೆಗೂ ಸಾಕಷ್ಟು ಇದೆ. ಹೆಚ್ಚು ಜನಬಳಕೆಯಿರದ ಸ್ಥಳಗಳನ್ನು ಗುರುತಿಸಿ ಟ್ರಿಪ್​ಗಳನ್ನು ಆಯೋಜಿಸುವುದು, ಸರ್ಕ್ಯೂಟ್​ಗಳ ಗುರುತು ಮಾಡಿ ಅಲ್ಲಿಗೆ ಪ್ರವಾಸಿಗರನ್ನು ಸೆಳೆಯುವುದು, ಸಾಮಾಜಿಕ ಜಾಲತಾಣದ ಸರಿಯಾದ ಬಳಕೆ, ಆಹಾರ-ಸಾಹಸ ಕೇಂದ್ರಿತ ಪ್ರವಾಸೋದ್ಯಮ, ಯೋಗ, ಆಯುರ್ವೆದ, ಕೃಷಿ ಚಟುವಟಿಕೆ ಇರುವ ಪ್ರವಾಸ ಕಾರ್ಯಕ್ರಮಗಳನ್ನು ಆಯೋಜಿಸಿ ಕಾರ್ಪೆರೇಟ್ ಜಗತ್ತನ್ನು ಸೆಳೆಯಬಹುದು. ಗ್ರಾಮೀಣ ದೇಸಿ ಆಟಗಳನ್ನು ಕೇಂದ್ರೀಕರಿಸಿ ಟೂರಿಸಂ ಹಬ್ ಮಾಡಬಹುದು. ಪ್ರವಾಸಿ ಬ್ಲಾಗಿಂಗ್ ಮೂಲಕ ಆದಾಯ ಗಳಿಸಬಹುದು. ಜತೆಗೆ ಸಾಮಾಜಿಕ ಜಾಲತಾಣ ಮುಖೇನ ಜನರನ್ನು ಆಕರ್ಷಿಸುವ ವ್ಯವಸ್ಥೆ ಮಾಡಬಹುದು. ಕೃಷಿ, ತೋಟಗಾರಿಕೆ, ಆಹಾರ, ಪರಿಸರ, ಕ್ರೀಡೆಯನ್ನು ಕೇಂದ್ರೀಕರಿಸಿ ಪ್ರವಾಸ ಚಟುವಟಿಕೆಗೆ ಹೊಸ ದೃಷ್ಟಿಕೋನ ನೀಡಬಹುದು. ಇದಕ್ಕೆ ಹೆಚ್ಚು ಹೂಡಿಕೆಯೂ ಬೇಕಾಗಿಲ್ಲ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಪ್ರವಾಸಿ ಸ್ಥಳಗಳ ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆಗೂ ಅವಕಾಶ ಇದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಯುವಜನರು ಯೋಚಿಸಬೇಕು. ಆಹಾರೋತ್ಪನ್ನ, ವಾಲ್ಯೂ ಆಡೆಡ್ ಪ್ರಾಡಕ್ಟ್​ಗಳ ಮಾರ್ಕೆಟಿಂಗ್​ಗೆ ಉತ್ತಮ ವಾತಾವರಣವಿದೆ. ಇದನ್ನು ಬೆಳೆಸುವ ನಿಟ್ಟಿನಲ್ಲಿ ಊರಿಗೊಂದು ಬ್ರ್ಯಾಂಡಿಂಗ್ ಕೂಡ ಮಾಡಿಕೊಳ್ಳಬಹುದಾಗಿದೆ.

| ಶ್ರುತಿ ಕನ್ನಡ ಚಲನಚಿತ್ರ ನಟಿ ಹಾಗೂ ಅಧ್ಯಕ್ಷೆ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net