ಮೇ 3ಕ್ಕೆ ಮುಗಿಯಲ್ಲ ದೇಶಾದ್ಯಂತ ಲಾಕ್​​ಡೌನ್​, ವಿಸ್ತರಣೆ ಕೋರುತ್ತಿರುವ 6 ರಾಜ್ಯಗಳು, ಇನ್ನಷ್ಟು ಸೇರಿಕೊಂಡರೆ ಅಚ್ಚರಿಯಿಲ್ಲ

Lockdown extention
Published on

ನವದೆಹಲಿ: ಬಹುತೇಕ ರಾಜ್ಯಗಳು ಏಪ್ರಿಲ್​ 14ರ ಬಳಿಕವೂ ಲಾಕ್​ಡೌನ್​ ವಿಸ್ತರಿಸಬೇಕೆಂದು ಕೋರಿದ್ದ ಕಾರಣಕ್ಕೆ ಹಾಗೂ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ಇದೊಂದೇ ದಾರಿಯಾಗಿದ್ದರಿಂದ ದೇಶಾದ್ಯಂತ ಈ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ.

ಎರಡನೇ ಹಂತದ ಲಾಕ್​ಡೌನ್​ ವಿಸ್ತರಣೆಯಾಗದಿದ್ದರೆ, ಈಗಾಗಲೇ ಸೋಂಕಿತರ ಸಂಖ್ಯೆ 2 ಲಕ್ಷ ತಲುಪುತ್ತಿತ್ತು ಎಂದು ಅಂದಾಜಿಸಲಾಗಿದೆ. ಇಷ್ಟಾದರೂ, ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇದೆ.

ಸದ್ಯ ಮೇ 3ರ ನಂತರ ಎಲ್ಲ ರೀತಿಯ ನಿರ್ಬಂಧಗಳನ್ನು ಏಕಕಾಲದಲ್ಲಿ ತೆರವು ಮಾಡಲಾಗದ ಕಾರಣ ಕೆಲವು ವಿನಾಯ್ತಿಗಳನ್ನು ಈಗಾಗಲೇ ಜಾರಿ ಮಾಡಲಾಗಿದೆ. ಇದು ಮೇ 3ರ ನಂತರ ಲಾಕ್​ಡೌನ್​ ವಿಸ್ತರಣೆಯಾಗಲ್ಲ ಎಂಬುದಕ್ಕೆ ಇದು ಸೂಚಕವೂ ಆಗಿತ್ತು. ಆದರೆ, ಕೆಲ ರಾಜ್ಯಗಳು ಲಾಕ್​ಡೌನ್​ ಅವಧಿ ವಿಸ್ತರಣೆ ಮಾಡಬೇಕೆಂದು ಕೋರುತ್ತಿರುವುದು ಇನ್ನಷ್ಟು ದಿಗಿಲು ಮೂಡಿಸಿದೆ.

ಕೇಂದ್ರ ಗೃಹ ಸಚಿವಾಲಯ ನಿರ್ಬಂಧಗಳನ್ನು ಸಡಿಲು ಮಾಡಿದ್ದರೂ, ಲಾಕ್​ಡೌನ್​ ಮುಂದುವರಿಸುವಂತೆ ದೆಹಲಿ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದೆ. ಇದೀಗ ಈ ಪಟ್ಟಿಗೆ ಇನ್ನೂ ಐದು ರಾಜ್ಯಗಳು ಸೇರ್ಪಡೆಯಾಗಿವೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್​ ಹಾಗೂ ಒಡಿಶಾ ರಾಜ್ಯಗಳು ಲಾಕ್​ಡೌನ್​ ಅವಧಿ ಮುಂದುವರಿಸಲು ಕೋರಿಕೆ ಸಲ್ಲಿಸಿವೆ.

ಮೇ 3ರ ವೇಳೆಗೆ ಪರಿಸ್ಥಿತಿ ನಿರೀಕ್ಷಿತ ಪ್ರಮಾಣದಲ್ಲಿ ಸುಧಾರಣೆ ಕಾಣದಿದ್ದಲ್ಲಿ, ಇನ್ನಷ್ಟು ರಾಜ್ಯಗಳು ಮುಖ್ಯವಾಗಿ ಇದೇ ಮನವಿಯನ್ನು ಸಲ್ಲಿಸಲಿವೆ. ಮುಖ್ಯವಾಗಿ ಗುಜರಾತ್​, ತಮಿಳುನಾಡು, ಆಂಧ್ರಪ್ರದೇಶ, ರಾಜಸ್ಥಾನ ಜತೆಗೆ ಕರ್ನಾಟಕವೂ ಇವುಗಳ ಪಟ್ಟಿಗೆ ಸೇರಿಕೊಂಡರೆ ಅಚ್ಚರಿಯಿಲ್ಲ. ಈ ರಾಜ್ಯಗಳೆಲ್ಲವೂ ದೊಡ್ಡ ಹಾಗೂ ಪ್ರಮುಖ ರಾಜ್ಯಗಳಾಗಿರುವುದರಿಂದ ಕೆಲ ಪ್ರದೇಶಗಳನ್ನು ಬಿಟ್ಟರೆ ದೇಶದ ಬಹುತೇಕ ಕಡೆ ಲಾಕ್​ಡೌನ್​ ಮುಂದುವರಿದಂತಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net