ಬೋರ್​ ಆಗುತ್ತಿದೆ ಎಂದು ಎಲೆ ತಟ್ಟೋಕೆ ಶುರು ಮಾಡಿದ್ರು.... ರಿಸಲ್ಟ್​ ಮಾತ್ರ ಭರ್ಜರಿ, 40 ಜನರಿಗೆ ಅಂಟಿದ ವ್ಯಾಧಿ

Vijayawada hospital
Published on

ವಿಜಯವಾಡಾ: ಟೈಮ್​ಪಾಸ್​ಗೆ ಏನ್​ ಮಾಡೋದು ಎಂದುಕೊಂಡು ಗಂಡಸರು ಎಲೆ ತಟ್ಟೊದ್ರಲ್ಲಿ (ಇಸ್ಪೀಟ್​) ಬಿಜಿಯಾದ್ರು. ಹೆಂಗಸರು ನಾವೇನ್​ ಕಮ್ಮಿ ಅಂತಾ ತಂಬೋಲಾ ಆಡೋದಕ್ಕೆ ಗುಂಪಾದರು. ಯಾರ್​ ಗೆದ್ರೋ, ಯಾರ್​ ಸೋತ್ರೋ ಗೊತ್ತಿಲ್ಲ, ಆದ್ರೆ, ರಿಸಲ್ಟ್​ ಮಾತ್ರ ಭರ್ಜರಿಯಾಗೇ ಬಂದಿದೆ.

ಆಂಧ್ರಪ್ರದೇಶದ ವಿಜಯವಾಡಾ ನಗರದಲ್ಲಿ ಜೂಜಾಟ ಹಾಗೂ ಗುಂಪಾಗಿ ಆಟವಾಡುತ್ತಿದ್ದವರ ಪೈಕಿ 24 ಜನರಲ್ಲಿ ಕೋವಿಡ್​ ಸೋಂಕು ಕಂಡು ಬಂದಿದೆ. ಇವರಲ್ಲೊಬ್ಬ ಚಾಲಕ ಎಲ್ಲೆಂದರಲ್ಲಿ ಸಂಚರಿಸಿ ಮತ್ತೆ 15 ಜನರಿಗೆ ಕರೊನಾ ಅಂಟಿಸಿದ್ದಾನೆ. ಇದೀಗ ಇಡೀ ಪ್ರದೇಶವನ್ನೇ ಲಾಕ್​ಡೌನ್​ ಮಾಡಲಾಗಿದೆ.

ಕೆಲಸವಿಲ್ಲದೇ ಮನೆಯಲ್ಲಿ ಇರುವ ಚಾಲಕರು, ಸ್ನೇಹಿತರು ಹಾಗೂ ನೆರೆಹೊರೆಯವರೊಂದಿಗೆ ಸೇರಿಕೊಂಡು ಇಸ್ಪೀಟ್​ ಆಟದಲ್ಲಿ ತೊಡಗಿದ್ದರು. ಇದೇ ವೇಳೆ ಇವರೊಂದಿಗೆ ಮಹಿಳೆಯರು ಕೂಡ ಗುಂಪಾಗಿ ತಂಬೋಲಾ ಆಟವಾಡುತ್ತಿದ್ದರು. ಇವರಲ್ಲಿ ಒಟ್ಟು 24 ಜನರಿಗೆ ಸೋಂಕು ವ್ಯಾಪಿಸಿದೆ ಎಂದು ಕೃಷ್ಣಾ ಜಿಲ್ಲೆಯ ಜಿಲ್ಲಾಧಿಕಾರಿ ಮೊಹಮ್ಮದ್​ ಇಮ್ತಿಯಾಜ್​ ಮಾಹಿತಿ ನೀಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಕಾರ್ಮಿಕನಗರದಲ್ಲಿ ಸೋಂಕಿತ ಚಾಲಕನೊಬ್ಬ ಎಲ್ಲೆಂದರಲ್ಲಿ ಅಲೆದಿದ್ದರಿಂದ 16 ಜನರಿಗೆ ಸೋಂಕು ತಗುಲಿದೆ. ಎರಡು ಪ್ರಕರಣಗಳಲ್ಲಿ 40 ಜನರು ಕೋವಿಡ್​-19 ತುತ್ತಾಗಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಸೋಂಕು ಹಬ್ಬಲು ಕಾರಣವಾಗಿದೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜನರು ಸದಾ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವಿಜಯವಾಡಾವೊಂದರಲ್ಲಿಯೇ 100ಕ್ಕೂ ಹೆಚ್ಚು ಜನರಿಗೆ ಸೋಮಕು ತಗುಲಿದ್ದು, ಆಂಧ್ರದ ಹಾಟ್​ಸ್ಪಾಟ್​ಗಳಲ್ಲಿ ಒಂದೆನಿಸಿದೆ. ಪ್ರಸ್ತುತ ಆಂಧ್ರದಲ್ಲಿ 1,061 ಪ್ರಕರರಣಗಳು ವರದಿಯಾಗಿದ್ದು, 31 ಜನರು ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net