ಕೆಳದಿ ಶಿವಪ್ಪನಾಯಕ ವಿವಿಯಲ್ಲಿ ಹಲವು ಸಾಧನೆ

Jagadiesh
ಡಾ.ಆರ್.ಸಿ.ಜಗದೀಶ, ಕುಲಸಚಿವ
Published on

ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿವಿಯಿಂದ ಹಲವು ಸಾಧನೆ ಮಾಡಲಾಗಿದೆ. ಸಾಗರ, ಹೊಸನಗರ ತಾಲೂಕಿನ ಕೆಲವು ಭಾಗಗಳಲ್ಲಿ ಬೆಳೆಯುವ ಹಲಸಿನ ಹಳದಿ ರುದ್ರಾಕ್ಷಿ, ಕೆಂಪು ರುದ್ರಾಕ್ಷಿ, ಕಿತ್ತಳೆ ಹಾಗೂ ಕೆಂಪು ಹಲಸಿನ ತಳಿಗಳನ್ನು ಸಸ್ಯ ತಳಿಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಅಡಿಯಲ್ಲಿ ನೋಂದಣಿ ಮಾಡಲಾಗಿದೆ ಎಂದು ಕುಲಪತಿ ಡಾ.ಆರ್.ಸಿ.ಜಗದೀಶ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಐದು ತಳಿಗಳ ಬಿಡುಗಡೆಗೆ ಶಿಫಾರಸು ಮಾಡಲಾಗಿದೆ. ಅಲಸಂದೆಯ ಸಹ್ಯಾದ್ರಿ ಸಮೃದ್ಧಿ, ತಂಬಾಕು-ಸಹ್ಯಾದ್ರಿ ಸ್ವರ್ಣ ತಳಿಗಳು ಇದರಲ್ಲಿ ಪ್ರಮುಖ. ಶೇಂಗಾ ತಳಿ ಸಹ್ಯಾದ್ರಿ ದುರ್ಗ, ಸಿಎಫ್‌ಎಂವಿ-1 ರಾಗಿ ತಳಿ ಹಾಗೂ ಆರ್‌ಎನ್‌ಆರ್-15048 ಭತ್ತದ ತಳಿಗಳ ಬಿಡುಗಡೆಗೆ ಶಿಫಾರಸು ಮಾಡಲಾಗಿದೆ ಎಂದರು.

ಹಸಿ ಮೆಣಸಿನಕಾಯಿಯಲ್ಲಿ ಡಬಲ್ ಹ್ಯಾಪ್ಲಾಯ್ಡಾಗಳ ಉತ್ಪಾದನೆಗೆ ಇನ್-ವಿಟ್ರೋ ಆಂಡ್ರೋಜೆನೆಸಿಸ್ ವಿಧಾನ ಮತ್ತು ಶೇಂಗಾ ಸುಲಿಯುವ ಯಂತ್ರಕ್ಕೆ ಎರಡು ಪೇಟೆಂಟ್‌ಗಳನ್ನು ಪಡೆಯಲಾಗಿದೆ. ತಳಿ ಅಭಿವೃದ್ಧಿ, ಬೆಳೆ ಉತ್ಪಾದನೆ, ಸಸ್ಯಸಂರಕ್ಷಣೆ, ತೋಟಗಾರಿಕೆ ಮತ್ತು ಯಾಂತ್ರೀಕೃತ ಬೇಸಾಯಗಳಲ್ಲಿ 9 ತಾಂತ್ರಿಕತೆಗಳನ್ನು ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಗೆ ಸೇರಿಸಲಾಗಿದೆ. 18 ತಾಂತ್ರಿಕತೆಗಳನ್ನು ರೈತರ ಜಮೀನಿನಲ್ಲಿ ಕ್ಷೇತ್ರ ಪ್ರಯೋಗಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net