ಯುವಕರು ಸೇನೆಗೆ ಸೇರಲು ಮುಂದಾಗಲಿ

KARGIL
ಮಾನ್ವಿ ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ನವಸ್ಫೂರ್ತಿ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು ಹಾಗೂ ಯೋಧನ ಪತ್ನಿಯನ್ನು ಗುರುವಾರ ಸನ್ಮಾನಿಸಲಾಯಿತು. ಮಾಜಿ ಸೈನಿಕ ಆಂಜನೇಯ ನಾಯಕ, ಸಂಸ್ಥೆ ಅಧ್ಯಕ್ಷ ಸುನಿಲ್ ವಿ., ಡಾ.ಅಂಬಿಕಾ ಮಧುಸೂದನ್ ಇತರರಿದ್ದರು.
Published on

ಮಾನ್ವಿ: ಕಾರ್ಗಿಲ್ ಯುದ್ಧದಲ್ಲಿ ದೇಶದ ಗೌರವ ಹೆಚ್ಚಿಸಿ ವೀರಮರಣ ಹೊಂದಿದ ಯೋಧರ ಸ್ಮರಣೆ ಪ್ರತಿದಿನ ಮಾಡಬೇಕು ಎಂದು ಮಾಜಿ ಸೈನಿಕ ಆಂಜನೇಯ ನಾಯಕ ನೀರಮಾನ್ವಿ ಹೇಳಿದರು.

ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ನವಸ್ಫೂರ್ತಿ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. 1999 ಮೇ ಯಿಂದ ಜುಲೈವರೆಗೆ ನಡೆದ ಯುದ್ಧದಲ್ಲಿ ದೇಶದ ಜಾಗ ಉಳಿಸಲು ಸಾಹಸ ಪ್ರದರ್ಶಿಸಿ 527 ಯೋಧರು ವೀರಮರಣ ಹೊಂದಿದರು. ಆದರೆ, ಯೋಧರು ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿದ್ದಾರೆ. ದೇಶದ ಭದ್ರತೆಗಾಗಿ ಶ್ರಮಿಸುವ ಯೋಧರನ್ನು ಗೌರವಿಸಬೇಕು. ಯುವಕರು ಸೈನ್ಯಕ್ಕೆ ಸೇರಲು ಮುಂದಾಗಬೇಕು ಎಂದರು.

ನವಸ್ಫೂರ್ತಿ ಸಂಸ್ಥೆಯ ಮಹಿಬೂಬ್ ಮದ್ಲಾಪುರ ಮಾತನಾಡಿ, ಮಂಜಿನ ಬೆಟ್ಟಗಳಲ್ಲಿ ತೀವ್ರ ಚಳಿಯಲ್ಲಿ ಎದುರಾಳಿಗಳನ್ನು ಬಗ್ಗು ಬಡಿಯುವ ಗುರಿಯೊಂದಿಗೆ ಸಾಗಿದ ನಮ್ಮ ಯೋಧರ ಪಡೆ ದೇಶವನ್ನು ರಕ್ಷಣೆ ಮಾಡಿ ಕಾರ್ಗಿಲ್‌ನಲ್ಲಿ ವಿಜಯ ಸಾಧಿಸಿ 24 ವರ್ಷ ಗತಿಸಿವೆ. ದೇಶ ರಕ್ಷಣೆಗಾಗಿ ಜೀವವನ್ನು ಭಾರತ ಮಾತೆಗೆ ಅರ್ಪಣೆ ಮಾಡಿದ ವೀರ ಯೋಧರನ್ನು ನಾವೆಲ್ಲರೂ ಸ್ಮರಿಸುವ ಅಗತ್ಯವಿದೆ ಎಂದು ತಿಳಿಸಿದರು.

ಯುದ್ಧದಲ್ಲಿ ಮರಣ ಹೊಂದಿದ ಯೋಧ ಅಮರೇಶ ಅವರ ಪತ್ನಿ ಪದ್ಮಾವತಿ, ಮಾಜಿ ಸೈನಿಕ ಬಸವರಾಜ್ ಮುಷ್ಟೂರು ಅವರನ್ನು ಸನ್ಮಾನಿಸಲಾಯಿತು. ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಫಿರದೋಸ್ ಬಾನು, ದ್ವಿತೀಯ ಸ್ಥಾನ ಪಡೆದ ಈರಮ್ಮ ಸಿಳ್ಳೆಕ್ಯಾತರ್, ತೃತೀಯ ಸ್ಥಾನ ಪಡೆದ ನಾಗಭೂಷಣ ಹಾಗೂ ಪ್ರಬಂಧ ಮತ್ತು ಚಿತ್ರಕಲೆ ಸರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಪ್ರಮುಖರಾದ ಸಂತೋಷ ತೋಟದ್, ಮಹೆಬೂಬ್ ಪಾಷಾ, ರೇಣುಕಾ, ರಾಮ ಬಂಡಿ, ಲಕ್ಷ್ಮಣ, ಉದಯ್, ಮಹ್ಮದ್ ಬೇಗ್, ವೆಂಕಟೇಶ, ಅಬ್ದುಲ್ ರೋಷನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net