ಮಲಗುಂಡಿ ಸ್ವಚ್ಛ ಮಾಡುವರ ಮುಖ್ಯವಾಹಿನಿಗೆ ತರುವ ಕೆಲಸ ಶೀಘ್ರ ಜಾರಿಗೊಳಿಸುವಂತೆ ಎಡಿಸಿ ಅನುರಾಧಾ ಸೂಚನೆ

IMG_7836 (1)
Published on

ಶಿವಮೊಗ್ಗ: ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಲಗುಂಡಿ ಸ್ವಚ್ಛ ಮಾಡುವರ ಪುನರ್ವಸತಿ ಸೌಲಭ್ಯ ನೀಡಿ ಮುಖ್ಯವಾಹಿನಿಗೆ ತರುವ ಕೆಲಸ ಶೀಘ್ರ ಜಾರಿಗೊಳ್ಳಬೇಕು ಎಂದು ಎಡಿಸಿ ಜಿ.ಅನುರಾಧಾ ಪಿಡಿಒಗಳಿಗೆ ಸೂಚನೆ ನೀಡಿದರು.
ಅಂಬೇಡ್ಕರ್ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ನಗರಾಭಿವೃದ್ಧಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಲಗುಂಡಿ ಸ್ವಚ್ಛ ಮಾಡುವರ ಸಮೀಕ್ಷೆ ನಡೆಸುವ ಕುರಿತು ಪಿಡಿಒಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಲಗುಂಡಿ ಸ್ವಚ್ಛ ಮಾಡುವರ ನೇಮಕಾತಿಯನ್ನು ಸಂಪೂರ್ಣ ನಿಷೇಧಿಸಬೇಕು. ಮಲಗುಂಡಿ ಸ್ವಚ್ಛ ಮಾಡುವವರನ್ನು ಗುರುತಿಸಿ ಅವರ ವೃತ್ತಿಯಿಂದ ಮುಕ್ತಗೊಳಿಸಿ ಸರ್ಕಾರದಿಂದ ನಿಗದಿಗೊಳಿಸಿದ ವಸತಿ, ಶಿಕ್ಷಣ ಸೇರಿ ಇತರ ಪುನರ್ವಸತಿ ಸೌಲಭ್ಯಗಳನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರಬೇಕು ಎಂದರು.
ಮನುಷ್ಯನ ಬದಲಾಗಿ ಯಂತ್ರಗಳ ಸಹಾಯದಿಂದಲೇ ಶೌಚಾಲಯ, ತೆರೆದ ಗುಂಡಿಗಳು ಮತ್ತು ಒಳ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಇದರಿಂದ ದುರ್ಘಟನೆಗಳು ನಡೆಯುವುದನ್ನು ತಡೆಯಬಹುದು ಮತ್ತು ಜಾಡಮಾಲಿಗಳನ್ನು ಈ ವೃತ್ತಿಯಿಂದ ಮುಕ್ತಗೊಳಿಸಬಹುದು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್ ಮಾತನಾಡಿ, ಜಾಡಮಾಲಿಗಳಿಗೆ ಗೌರವಯುತ ಬದುಕನ್ನು ಕಟ್ಟಿಕೊಡಬೇಕು. ಅವರು ಶೌಚಾಲಯ ತೆರೆದ ಗುಂಡಿ ಮತ್ತು ಒಳ ಚರಂಡಿಗಳನ್ನು ದೈಹಿಕವಾಗಿ ಸ್ವಚ್ಛಗೊಳಿಸುವುದನ್ನು ತಡೆಯಬೇಕು. ಅಲ್ಲದೇ ಮಲಗುಂಡಿ ಸ್ವಚ್ಛ ಮಾಡುವರ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ-2013ರನ್ವಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಲಗುಂಡಿ ಸ್ವಚ್ಛ ಮಾಡುವರ ಗಣತಿ ಏ.18ರೊಳಗೆ ಪೂರ್ಣಗೊಳಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net