

ರಾಯಚೂರು: ಆರು ತಿಂಗಳ ನಂತರ ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಬಾಗಿಲು ತೆರೆದಿದ್ದು, ಶುಕ್ರವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ
ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 21ರಿಂದ ಭಕ್ತರಿಗೆ ಪ್ರವೇಶ ನಿಷೇಧಿಸಿ ಶ್ರೀಮಠದ ಬಾಗಿಲನ್ನು ಹಾಕಲಾಗಿತ್ತು. ಸುಮಾರು 200 ದಿನಗಳ ನಂತರ ರಾಯರ ಮಠದಲ್ಲಿ ಭಕ್ತರಿಗೆ ವೃಂದಾವನ ದರ್ಶನಕ್ಕೆ ಅವಕಾಶ ಕಲ್ಪಿಸಲು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಠದ ಮಹಾದ್ವಾರಕ್ಕೆ ಪೂಜೆ ಸಲ್ಲಿಸಿ ಬಾಗಿಲು ತೆಗೆದರು. ಮಠವನ್ನು ತಳಿರು-ತೋರಣದಿಂದ ಸಿಂಗರಿಸಲಾಗಿತ್ತು.
ವಿಐಪಿ ದರ್ಶನವಿಲ್ಲ. ಸಾಮಾನ್ಯ ದರ್ಶನಕ್ಕಷ್ಟೇ ಅನುಮತಿ ನೀಡಲಾಗಿದೆ. ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಯರ ದರ್ಶನಕ್ಕೆ ಬರುವ ಭಕ್ತರು ಮಾಸ್ಕ್ ಧರಿಸುವ ಜತೆಗೆ ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯುವಂತಿಲ್ಲ. ರಾಯರ ಮಠದ ಬಾಗಿಲು ತೆರೆಯುವ ಸುದ್ದಿ ತಿಳಿದ ಭಕ್ತರು ಶುಕ್ರವಾರ ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದರು.