

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ ಉತ್ತರಾರಾಧನೆ ಮಹೋತ್ಸವದ ಅಂಗವಾಗಿ ಇಂದು ವಿವಿಧ ವಾದ್ಯ ಮೇಳಗಳೊಂದಿಗೆ ಮಹಾ ರಥೋತ್ಸವವು ವಿಜೃಂಭಣೆಯಿಂದ ಜರುಗಿದೆ.
ಮಂತ್ರಾಲಯದಲ್ಲಿ ನಡೆಯುತ್ತಿರುವ ಗುರುರಾಯರ 350ನೇ ಆರಾಧನೆ ಮಹೋತ್ಸವದ ಉತ್ತರಾರಾಧನೆ ನಿಮಿತ್ತ ಉತ್ಸವ ಮೂರ್ತಿ ಪ್ರಹ್ಲಾದರಾಜರ ಮೆರವಣಿಗೆಯು ಗುರುಕುಲದಿಂದ ಶ್ರೀ ಮಠಕ್ಕೆ ಆಗಮಿಸಿತು. ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ರಥೋತ್ಸವ ನಡೆಯಿತು. ಇದಕ್ಕೂ ಮುಂಚೆ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಅಭಿಷೇಕ, ಅಲಂಕಾರ ಜರುಗಿತು. ಮೆರವಣಿಗೆ ನಂತರ ಶ್ರೀಗಳಿಂದ ವಸಂತೋತ್ಸವ ನಡೆಯಿತು.
ರಥೋತ್ಸವದ ಸಂದರ್ಭದಲ್ಲಿ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿ ನಡೆಸಿದ್ದು ವಿಶೇಷ. ದೇಶದ ವಿವಿಧ ಭಾಗಗಳಿಂದ ಈ ಆಚರಣೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.