ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಾಮಾಚಾರ

2 Dwd 2
Published on

ಧಾರವಾಡ: ನಗರದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಾಮಾಚಾರ ನಡೆದಿದೆ. ಇತಿಹಾಸ ಮತ್ತು ಶಾಸನಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರಮಾ ಅವರ ಕೊಠಡಿಯ ಟೇಬಲ್ ಮೇಲೆ ಮಾಟ- ಮಂತ್ರದ ಕುರುಹುಗಳು ಪತ್ತೆಯಾಗಿವೆ.
ಕಪ್ಪು ಗೊಂಬೆ, ೩ ಲಿಂಬೆ ಹಣ್ಣು, ಕೆಂಪು ಮೆಣಸಿನಕಾಯಿ ಇಡಲಾಗಿದ್ದು, ಟೇಬಲ್ ತುಂಬ ಅರಿಷಿಣ, ಕುಂಕುಮ ಎರಚಲಾಗಿದೆ. ತಮ್ಮ ಕೊಠಡಿಗೆ ಬೀಗ ಹಾಕಿ ರಜೆ ಮೇಲೆ ತೆರಳಿದ್ದ ಡಾ. ರಮಾ ಅವರು ಶುಕ್ರವಾರ ಮರಳಿ ಬಂದು ನೋಡಿದಾಗ ವಾಮಾಚಾರದ ಕುರುಹುಗಳು ಕಂಡಿವೆ. ಇದರಿಂದ ಗಾಬರಿಗೊಂಡ ಅವರು, ಕುಲಪತಿ ಪ್ರೊ. ಕೆ.ಬಿ. ಗುಡಸಿ ಅವರಿಗೆ ದೂರು ನೀಡಿದ್ದಾರೆ.
ಅದೇ ವಿಭಾಗದ ಉಪನ್ಯಾಸಕ ಹಾಗೂ ಡಾ. ರಮಾ ಮಧ್ಯೆ ವಿಭಾಗದ ಕೊಠಡಿಯ ವಿಚಾರವಾಗಿ ಜಗಳ ನಡೆದಿತ್ತು. ಹಿಂದೊಮ್ಮೆ ವಿದ್ಯಾರ್ಥಿಗಳ ಎದುರೇ ಉಪನ್ಯಾಸಕ ಡಾ. ರಮಾ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಕೊಠಡಿಯನ್ನು ಖಾಲಿ ಮಾಡಿಸುವ ಉದ್ದೇಶದಿಂದ ಅವರೇ ಮಾಟ- ಮಂತ್ರ ಮಾಡಿಸಿರಬಹುದು ಎಂದು ಕುಲಪತಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ವಿಶ್ವವಿದ್ಯಾಲಯದಲ್ಲಿ ಇಂಥ ಕೀಳು ಮಟ್ಟದ ಕೃತ್ಯ ನಡೆದಿರುವುದು ಬೇಸರ ಮೂಡಿಸಿದೆ. ಡಾ. ರಮಾ ಅವರು ನೀಡಿರುವ ದೂರಿನ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಕುಲಪತಿ ಪ್ರೊ. ಗುಡಸಿ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net