ಕಳ್ಳ ಮೊಬೈಲ್​ ಕಸಿದುಕೊಂಡ ರಭಸಕ್ಕೆ ರೈಲಿನಿಂದ ಕೆಳಗೆ ಬಿದ್ದ ಯುವಕ: ಕಾಲುಗಳು ನುಜ್ಜುಗುಜ್ಜು! Mobile Theft

Mobile Theft
Published on

Mobile Theft : ಖದೀಮನೊಬ್ಬ ಮೊಬೈಲ್​ ಕಸಿದುಕೊಂಡ ರಭಸಕ್ಕೆ ವ್ಯಕ್ತಿಯೊಬ್ಬ ಆಯತಪ್ಪಿ ಚಲಿಸುವ ರೈಲಿನಿಂದ ಕೆಳಗೆ ಬಿದ್ದಂತಹ ಸಂದರ್ಭದಲ್ಲಿ ರೈಲಿನ ಚಕ್ರಕ್ಕೆ ಆತನ ಕಾಲು ಸಿಲುಕಿ ಅಪ್ಪಚ್ಚಿಯಾಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಸೆಂಟ್ರಲ್ ರೈಲ್ವೆಯ ಶಹಾದ್ ಮತ್ತು ಅಂಬಿವಾಲಿ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಪ್ರಯಾಣಿಕ ಸ್ಥಳೀಯ ರೈಲಿನ ಬಾಗಿಲಲ್ಲಿ ಕುಳಿತಿದ್ದ. ಅಂದಹಾಗೆ, ರೈಲಿನಲ್ಲಿ ಯಾವುದೇ ಕಾರಣಕ್ಕೂ ಬಾಗಿಲಲ್ಲಿ ಕುಳಿತು ಪ್ರಯಾಣಿಸಬೇಡಿ. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ.

ಕಾಲು ಕಳೆದುಕೊಂಡ ಪ್ರಯಾಣಿಕನನ್ನು ಗೌರವ್​ ನಿಕಮ್​ ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಮಾತನಾಡಿದ ಗೌರವ್​, ಯಾರೋ ನನ್ನ ಕೈಯನ್ನು ಎಳೆದು ಫೋನ್ ಕಸಿದುಕೊಂಡರು. ಇದರಿಂದ ನಾನು ಕೆಳಗೆ ಬಿದ್ದೆ. ಈ ವೇಳೆ ರೈಲಿನ ಬಾಗಿಲನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದೆ. ಆದರೆ, ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೆಳಗೆ ಬಿದ್ದೆ ಮತ್ತು ನನ್ನ ಕಾಲುಗಳು ರೈಲಿನ ಕೆಳಗೆ ಸಿಲುಕಿದವು ಎಂದು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೋ ಲಭ್ಯವಾಗಿದ್ದು, ದೃಶ್ಯಗಳಲ್ಲಿ ಗೌರವ್​ ಅವರ ಎರಡೂ ಕಾಲುಗಳಿಗೆ ತೀವ್ರವಾದ ಗಾಯಗಳಾಗಿವೆ. ಅದರಲ್ಲಿ ಒಂದು ಕಾಲು ಸಂಪೂರ್ಣವಾಗಿ ನಜ್ಜುಗುಜ್ಜಾಗಿರುವುದು ಕಂಡುಬಂದಿದೆ. ಪ್ರಸ್ತುತ ಗೌರವ್​ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಸರ್ಕಾರಿ ರೈಲ್ವೆ ಪೊಲೀಸರ ಕಲ್ಯಾಣ್ ಘಟಕವು ತನಿಖೆ ನಡೆಸುತ್ತಿದ್ದು, ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದೆ.

ಅಂದಹಾಗೆ, ರೈಲ್ವೆಯಲ್ಲಿ ಮೊಬೈಲ್ ಫೋನ್ ಕಳ್ಳತನಗಳು ಹೆಚ್ಚು ವರದಿಯಾಗುವ ಅಪರಾಧಗಳಲ್ಲಿ ಒಂದಾಗಿದೆ. ಆಘಾತಕಾರಿ ಸಂಗತಿ ಏನೆಂದರೆ, ಈ ಅಪರಾಧಗಳ ಹಿಂದಿರುವ ಆರೋಪಿಗಳು ಮಾದಕ ವ್ಯಸನಿಗಳು ಮತ್ತು ಸಂಘಟಿತ ಗ್ಯಾಂಗ್‌ಗಳು. ಹಲವಾರು ಅಂತಾರಾಜ್ಯ ಗ್ಯಾಂಗ್‌ಗಳು ಪ್ರಯಾಣಿಕರಿಂದ ಫೋನ್‌ಗಳನ್ನು ಕದಿಯುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರಿ ರೈಲ್ವೆ ಪೊಲೀಸರ ಬಳಿ ಲಭ್ಯವಿರುವ ಮಾಹಿತಿಯ ಪ್ರಕಾರ, 2023ರ ಜನವರಿಯಿಂದ 2025ರ ಮೇ ನಡುವೆ 26,000 ಕ್ಕೂ ಹೆಚ್ಚು ಸೆಲ್ ಫೋನ್‌ಗಳನ್ನು ಕಳವು ಮಾಡಲಾಗಿದೆ. ಇನ್ನು 2023 ಮತ್ತು 2024ರ ನಡುವೆ ಫೋನ್ ಕಳ್ಳತನಗಳು ಸುಮಾರು 10 ರಷ್ಟು ಕಡಿಮೆಯಾಗಿದೆ ಅಂತಾನೂ ಪೊಲೀಸರು ಹೇಳಿದ್ದಾರೆ. 2023 ರಲ್ಲಿ 12,159 ಫೋನ್‌ಗಳು ಕದ್ದಿದ್ದರೆ, 2024 ರಲ್ಲಿ ಆ ಸಂಖ್ಯೆ 10,891 ಕ್ಕೆ ಇಳಿದಿದೆ. 2025ರ ಮೇವರೆಗೆ ಮುಂಬೈನ ಉಪನಗರ ರೈಲ್ವೆ ಜಾಲದಲ್ಲಿ ಸುಮಾರು 3,508 ಫೋನ್‌ಗಳು ಕದ್ದಿರುವ ಬಗ್ಗೆ ವರದಿಯಾಗಿದೆ.

ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಗರದ ಜೀವನಾಡಿಯಾದ ಮುಂಬೈನ ಸ್ಥಳೀಯ ರೈಲು ಜಾಲವು ಜನದಟ್ಟಣೆಯಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಮುಂಬೈ ಪ್ರದೇಶದ ಜೀವನಾಡಿಯಾದ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಕರನ್ನು ದನಗಳಂತೆ ತುಂಬಿಕೊಂಡು ಪ್ರಯಾಣಿಸುತ್ತಿರುವುದನ್ನು ನೋಡಲು ನಾಚಿಕೆಯಾಗಿದೆ ಎಂದು ಸರ್ಕಾರಕ್ಕೆ ಛೀಮಾರಿ ಹಾಕಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net