VIDEO| ಧಾರ್ಮಿಕ ಸೌಹಾರ್ದತೆಗೆ ಧಕ್ಕೆ; ಆರೋಪಿಗಳ ಮನೆ ಮೇಲೆ ಜೆಸಿಬಿ ಕಾರ್ಯಾಚರಣೆ

Demolition Drive
Published on

ಭೋಪಾಲ್​: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮೆರವಣಿಗೆ ವೇಳೆ ಉದ್ದೇಶಪೂರ್ವಕವಾಗಿ ಶಾಂತಿ ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಮೂವರ ಮನೆಯನ್ನು ಜಿಲ್ಲಾಡಳಿತದ ನೇತೃತ್ವದಲ್ಲಿ ಹೊಡೆದು ಹಾಕಲಾಗಿದೆ.

ಸೋಮವಾರ ಉಜ್ಜಯಿನಿಯಲ್ಲಿ ನಡೆದ ಮಹಾಕಾಲ್​ ಕಿ ಸವಾರಿ ಮೆರವಣಿಗೆ ವೇಳೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಮೂವರು ಉದ್ದೇಶಪೂರ್ವಕವಾಗಿ ತಮ್ಮ ಮನೆಯ ಟೆರೇಸ್​ ಮೇಲಿಂದ ಭಕ್ತಾದಿಗಳ ಮೇಲೆ ಉಗುಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ವಿಡಿಯೋ ವೈರಲ್​ ಆದ ಬೆನ್ನಲ್ಲೇ ,ಮುಂಜಾಗ್ರತ ಕ್ರಮವಾಗಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಈ ಪೈಕಿ ಓರ್ವ ಅಪ್ರಾಪ್ತ ವಯಸ್ಕನಾಗಿದ್ದಾನೆ. ಬಂಧಿತರ ಮೆನಯನ್ನು ಕೆಡವಿರುವ ಮಧ್ಯಪ್ರದೇಶ ಸರ್ಕಾರ ಡಿಜೆ ಹಾಗೂ ಡ್ರಮ್ಸ್​ಗಳ ಸದ್ದಿನೊಂದಿಗೆ ಕಾರ್ಯಾಚರಣೆ ನಡೆಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಜ್ಜಯಿನಿ ಜಿಲ್ಲಾ ಪೊಲೀಸ್​ ಉಪ ವರಿಷ್ಠಾಧಿಕಾರಿ ಆಕಾಶ್​ ಭುರಿಯಾ ಧಾರ್ಮಿಕ ಕಾರ್ಯಕ್ರಮ ನಡೆಯುವ ವೇಳೆ ಕೆಲವರು ಶಾಂತಿ-ಸಾಹಾರ್ದತೆಗೆ ಧಕ್ಕೆ ತರಲು ಯತ್ನಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ FIR ದಾಖಲಿಸಲಾಗಿದ್ದು, ನಗರಸಭೆ ಹಾಗೂ ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದೇವೆ.

ನಗರಸಭೆ ಹಾಗೂ ಕಂದಾಯ ಇಲಾಖೆಯ ನೇತೃತ್ವದಲ್ಲಿ ಆರೋಪಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದ್ದ ಜಾಗವನ್ನು ಬಿಗಿ ಭದ್ರತೆಯಲ್ಲಿ ಹೊಡೆದು ಹಾಕಲಾಗಿದೆ. ಡ್ರಮ್​ ಹಾಗೂ ಡಿಜೆಯನ್ನು ಸಾರ್ವಜನಿಕರಿಗೆ ಅತಿಕ್ರಮಣ ತೆರವು ಕಾರ್ಯಾಚರಣೆ ಮಾಡುತ್ತಿರುವುದಾಗಿ ತಿಳಿಸಲು ಉಪಯೋಗಿಸಲಾಯಿತು ಎಂದು ಉಜ್ಜಯಿನಿ ಜಿಲ್ಲಾ ಪೊಲೀಸ್​ ಉಪ ವರಿಷ್ಠಾಧಿಕಾರಿ ಆಕಾಶ್​ ಭುರಿಯಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net