ಮನೋಲ್ಲಾಸ: ಪರರ ಕಷ್ಟವನ್ನು ಅರಿಯುವುದೇ ಮೌಲ್ಯ

manollasa
Published on
| ಸುಮಾವೀಣಾ

"ಪರರ ಕಷ್ಟಮಂ ಸುಖಿ ಅರಿಯನ್​'- ಕಷ್ಟ- ಸುಖಗಳ ಪರಾಮರ್ಶೆ ಮಾಡುವಂಥ ವಾಕ್ಯವಿದು. ದೇವರಾಜ ಕವಿಯ "ರಾಜಾವಳಿ ಕಥಾಸಾರ' (ಪುಟ 241)ದಲ್ಲಿ ಬರುತ್ತದೆ. ಕೆಲವರಿಗೆ ತಾನು ಚೆನ್ನಾಗಿದ್ದೇನೆ ಎಂದ ಮಾತ್ರಕ್ಕೆ ಎಲ್ಲರೂ ಚೆನ್ನಾಗಿರುತ್ತಾರೆ ಎಂಬ ಹುಸಿನಂಬಿಕೆ ಇರುತ್ತದೆ. ಸುಖವಿದ್ದಾಗ ಎಲ್ಲರೂ ಸುಖಿಗಳು ಎಂದು ತಿಳಿಯುವವನು ಕಷ್ಟ ಎಂದಾಗ ಆಚೆ ತಿರುಗಿ ಕೂಡ ನೋಡುವುದಿಲ್ಲ. ಇದೊಂದು ವೆರುಧ್ಯ. ಒಮ್ಮೆ ನದಿ ದಡದಲ್ಲಿ ವ್ಯಕ್ತಿಯೊಬ್ಬ ಕುಳಿತು ನಾಮ ಧರಿಸುತ್ತಿದ್ದ. ಆಚೆ ದಡದಲ್ಲಿರುವ ವ್ಯಕ್ತಿಯೊಬ್ಬನನ್ನು ಏನೋ ತುರ್ತು ಎನ್ನುವಂತೆ ಬೇಗ ಬರುವಂತೆ ಕೂಗಿದ. ಅವನ ಆತುರದ ಕರೆಗೆ ಈತ ನೀರನ್ನು ಹಾದು ತರಾತುರಿಯಿಂದ ಹೋದರೆ, "ನನ್ನ ಯಾವ ಭಾಗದ ನಾಮ ಚೆನ್ನಾಗಿದೆ ಹೇಳು?' ಎಂದು ಕೇಳಿದ. ಗಾಬರಿಗೊಂಡು ಆತುರದಿಂದ ದಡ ದಾಟಿ ಹೋದ ವ್ಯಕ್ತಿಗೆ ನಿರಾಶೆಯಾಯಿತು. ಅಷ್ಟೇನು ಮಹತ್ವವಲ್ಲದ ಕಾರಣಕ್ಕೆ ಸಮಯ ಮತ್ತು ಶ್ರಮ ವ್ಯರ್ಥವಾಯಿತು. "ನಾಮ ಸರಿಯಿದೆಯೋ, ಇಲ್ಲವೋ?' ಎಂದು ಕೇಳಿದ ವ್ಯಕ್ತಿಯಂಥ ಜವಾಬ್ದಾರಿರಹಿತ ಜನರು ನಮ್ಮ ನಡುವೆ ಸಾಕಷ್ಟು ಇರುತ್ತಾರೆ.

ಫ್ರಾನ್ಸಿನ ಮಹಾಕ್ರಾಂತಿಯಲ್ಲಿ ಬರುವ "ರೊಟ್ಟಿ ಪ್ರಕರಣ'ವೂ ಹಾಗೆಯೇ. ಹಸಿವಿನಿಂದ ಕಂಗಾಲಾಗಿದ್ದ ಪ್ರಜೆಗಳು ವಿಲಾಸಿ ಜೀವನದಲ್ಲಿದ್ದ ರಾಣಿ ಮೇರಿಆ್ಯಂಟನಿಟೆ ಬಳಿ, "ತಿನ್ನಲು ರೊಟ್ಟಿಯಿಲ್ಲ' ಎಂದು ಕೇಳಿದರೆ ಆಕೆ "ರೊಟ್ಟಿಯಿಲ್ಲದಿದ್ದರೆ ಕೇಕ್​ ತೆಗೆದುಕೊಂಡು ತಿನ್ನಿ' ಎಂದಿದ್ದಳಂತೆ. ಸಿರಿಗರ ಬಡಿದವರು ಹಾಗೆನೇ ಅಲ್ವೇ! ಹೊಟ್ಟೆ ತುಂಬಿದವನಿಗೆ ಹಸಿವಿನ ಸಂಕಟ ತಿಳಿಯದು. ಬೇಂದ್ರೆಯವರ "ಹಸಿದವನೆ ಬಲ್ಲ ಹಸಿವೆಯ ಶೂಲಿ' ಮಾತುಗಳು ಅರ್ಥಪೂರ್ಣ. ಕೆಲವರು ತಾವು ಅನುಭವಿಸಿದಾಗ ಮಾತ್ರ ಆ ಕಷ್ಟದ ತೀವ್ರತೆಯನ್ನು ಅರಿಯುತ್ತಾರೆ, ಆದರೆ ಸ್ಪಂದಿಸಲು ಮರೆಯುತ್ತಾರೆ. ಹೀಗಾಗಕೂಡದು.

"ರೋಮ್​ ನಗರವೆ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ನಿರೋ ಪಿಟೀಲು ಬಾರಿಸುತ್ತಿದ್ದ' ಎಂಬ ವಿಚಾರವೂ ಎಲ್ಲರಿಗೂ ತಿಳಿದಿರುವಂಥದ್ದೆ. "ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ', "ಚಿಂತೆಯಿಲ್ಲದವನಿಗೆ ಸಂತೆಯಲ್ಲಿ ನಿದ್ರೆ' ಎಂಬ ಗಾದೆಗಳನ್ನು ಸಂವಾದಿಯಾಗಿ ತೆಗೆದುಕೊಳ್ಳಬಹುದು. ತನ್ನಂತೆ ಪರರು ಎಂಬ ಮನೋಭಾವನೆ ಇರಬೇಕು. ತನಗೇನು ಬೇಕೋ ಅದನ್ನು ಪಡೆಯಲು ಇತರರ ಸಹಾಯ ಪಡೆಯುವಂತೆ, ಇತರರಿಗೆ ಬೇಕಾದ್ದನ್ನು ಪಡೆಯಲು ನಾವು ಸಹಕರಿಸಬೇಕು. ಸಹಾಯ ಕೇಳಬೇಕು ನಿಜ, ಆದರೆ ನಾವು ಕೇಳುವ ಸಹಾಯ ನಿಜಕ್ಕೂ ಸಹಾಯವೇ ಎನ್ನುವುದರ ಅವಲೋಕನವೂ ಮುಖ್ಯ. ತೊಂದರೆಯಲ್ಲಿ ಸಿಲುಕಿ ಅದರಿಂದ ಬಿಡಿಸಿಕೊಳ್ಳಲು ಕಷ್ಟಸಾಧ್ಯ ಎಂದಾಗ ಇತರರನ್ನು ಕೇಳುವುದು ಸರಿ! ಇತರರಿಗೆ ನೆರವಾಗುವಾಗಲೂ ಅಷ್ಟೇ, ಅವರ ಕಷ್ಟ, ನೋವನ್ನು ಗಮನಿಸಿ, ಪ್ರಾಂಜಲ ಮನಸ್ಸಿನಿಂದ ಸ್ಪಂದಿಸಬೇಕೆ ಹೊರತು ತೋರಿಕೆಗಾಗಿ ಅಲ್ಲ. ಹೀಗೆ ಮಾಡುವ ಸಣ್ಣ ಸಹಾಯವೂ ಸಂತೃಪ್ತಿ, ಸಾರ್ಥಕತೆ ಒದಗಿಸುತ್ತದೆ. ಇದೇ ಮಾನವೀಯತೆಯ ಮೌಲ್ಯವೂ ಹೌದು!

(ಲೇಖಕರು ಉಪನ್ಯಾಸಕರು, ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net