ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ: ರಾಜಕೀಯ ಮುಖಂಡನ ಬಂಧನ! Manohar Lal Dhakad

Manohar Lal Dhakad
Published on

Manohar Lal Dhakad : ಮಧ್ಯಪ್ರದೇಶದ ಮಂದ್ಸೌರ್ ಮೂಲದ ಮನೋಹರ್ ಲಾಲ್ ಧಕಾಡ್ ಎಂಬಾತ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ವ್ಯಕ್ತಿಯಾಗಿದ್ದಾನೆ. ಅದಕ್ಕೆ ಕಾರಣ ದೆಹಲಿ-ಮುಂಬೈ 8-ಲೇನ್ ಎಕ್ಸ್‌ಪ್ರೆಸ್‌ವೇಯಲ್ಲಿ ರಾತ್ರಿ ವೇಳೆ ಮಹಿಳೆಯೊಂದಿಗೆ ಅಸಭ್ಯ ಚಟುವಟಿಕೆಯಲ್ಲಿ ತೊಡಗಿರುವ ಆರೋಪ ಕೇಳಿಬಂದಿದ್ದು, ಅದಕ್ಕೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ವಿಡಿಯೋ ತುಣುಕು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದ್ದು, ತಕ್ಷಣವೇ ವೈರಲ್ ಆಗಿ, ವಿವಾದ ಭುಗಿಲೆದ್ದಿದೆ.

ವೈರಲ್​ ಆಗಿರುವ ವಿವಾದಾತ್ಮಕ ವಿಡಿಯೋದಲ್ಲಿ, ಆರೋಪಿ ಮನೋಹರ್​ ಧಕಾಡ್, ಬಿಳಿ ಬಲೆನೊ ಕಾರಿನ (MP14CC4782) ಮುಂದೆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ. ಅದು ಕೂಡ ಸಾರ್ವಜನಿಕವಾಗಿ. ಕಾರು ಸಂಖ್ಯೆಯ ಆಧಾರದ ಮೇಲೆ, ವಾಹನವನ್ನು ಮನೋಹರ್ ಲಾಲ್ ಧಕಾಡ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ, ಧಕಾಡ್ ತನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಬಂಧಿಸಲಾಗಿದೆ.

ಘಟನೆಯ ಕುರಿತು ಮಂದ್ಸೌರ್ ಜಿಲ್ಲೆಯ ಭಾನ್ಪುರ​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾಕಡ್​ ವಿರುದ್ಧ ಸೆಕ್ಷನ್ 296, 285, 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅವರ ಜೊತೆಗಿದ್ದ ಮಹಿಳೆಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ.

ವಿಡಿಯೋದಲ್ಲಿರುವ ವ್ಯಕ್ತಿ ಬಿಜೆಪಿ ನಾಯಕ ಎಂದು ಹೇಳಲಾಗುತ್ತಿದ್ದು, ಈ ವಿಚಾರವಾಗಿ ಬಿಜೆಪಿ ಕೂಡ ಪ್ರತಿಕ್ರಿಯಿಸಿದೆ. ಧಕಾಡ್ ಅವರು ಬಿಜೆಪಿ ನಾಯಕರಲ್ಲ. ಅವರು ಆನ್‌ಲೈನ್‌ನಲ್ಲಿ ಸದಸ್ಯತ್ವ ಪಡೆದಿರಬಹುದು. ಆದರೆ, ಅವರು ಯಾವುದೇ ಹುದ್ದೆಯನ್ನು ಹೊಂದಿಲ್ಲ ಎಂದು ಮಂದ್ಸೌರ್ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ್ ದೀಕ್ಷಿತ್ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಮನೋಹರ್ ಲಾಲ್ ಧಾಕಡ್ ಅವರ ಪತ್ನಿ ಬಿಜೆಪಿ ಬೆಂಬಲದೊಂದಿಗೆ ಜಿಲ್ಲಾ ಪಂಚಾಯತ್‌ನ 8ನೇ ವಾರ್ಡ್‌ನ ಚುನಾಯಿತ ಸದಸ್ಯರಾಗಿದ್ದಾರೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ, ಬಿಜೆಪಿ ಪಕ್ಷ ಅವರಿಂದ ಸ್ಪಷ್ಟ ಅಂತರ ಕಾಯ್ದುಕೊಳ್ಳುತ್ತಿದೆ.

ಈ ಘಟನೆಯ ನಂತರ, ಧಾಕಡ್ ಮಹಾಸಭಾ ಯುವ ಸಂಘವೂ ಪ್ರತಿಕ್ರಿಯಿಸಿದ್ದು, ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮನೋಹರ್ ಲಾಲ್ ಧಾಕಡ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಘೋಷಿಸಿದೆ. ಈ ನಿರ್ಧಾರವನ್ನು ಸಂಸ್ಥೆಯ ಅಧ್ಯಕ್ಷ ಡಾ. ಅರ್ಜುನ್ ಧಾಕಡ್ ತೆಗೆದುಕೊಂಡಿದ್ದಾರೆ. ಈ ವಿವಾದದಿಂದಾಗಿ ತಮ್ಮ ಸಂಸ್ಥೆಗೆ ಹಾನಿಯಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಪ್ರಸ್ತುತ, ಈ ಘಟನೆಯ ಕುರಿತು ಪೊಲೀಸ್ ತನಿಖೆ ಮುಂದುವರೆದಿದೆ. ಧಾಕಡ್‌ಗೆ ಸಂಬಂಧಿಸಿದ ಮಾಹಿತಿಗಾಗಿ ಶೋಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net