

ನವದೆಹಲಿ: ಪಂಜಾಬ್ನ ನೂತನ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ಮುಖಂಡ ಭಗವಂತ ಸಿಂಗ್ ಮಾನ್ (48) ಪ್ರಮಾಣ ವಚನ ಸ್ವೀಕರಿಸಿದ್ದು, ಜನರನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ಭ್ರಷ್ಟಾಚಾರ ಹಾಗೂ ಕೃಷಿ ಬಿಕ್ಕಟ್ಟುಗಳಿಗೆ ಸರ್ಕಾರ ಪರಿಹಾರ ಕಂಡುಕೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ರಾಜ್ಯದ ಶಹೀದ್ ಭಗತ್ ಸಿಂಗ್ ನಗರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಪೂರ್ವಜರ ಹಳ್ಳಿ ಖಟ್ಕರ್ ಕಲಾನ್ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಾನ್, ಭಗತ್ ಸಿಂಗ್ ಅವರಿಗೆ ನಾನು ಹೃದಯದಲ್ಲಿ ವಿಶೇಷ ಸ್ಥಾನ ನೀಡಿದ್ದೇನೆ. ಹಿಂದೆಲ್ಲಾ ಕ್ರಿಕೆಟ್ ಮೈದಾನ ಅಥವಾ ರಾಜಭವನಗಳಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ, ಬಾರಿ ಹಳ್ಳಿಯಲ್ಲಿ ನಡೆಯುತ್ತಿದೆ. ಪಂಜಾಬ್ನ ಎಲ್ಲರಿಗೂ ನಾನು ಮುಖ್ಯಮಂತ್ರಿ. ನನಗೆ ಮತ ನೀಡದವರ ಏಳಿಗೆಗೂ ಶ್ರಮಿಸುತ್ತೇನೆ ಎಂದು ಭಾಷಣದಲ್ಲಿ ತಿಳಿಸಿದ್ದಾರೆ.
ನಮ್ಮ ಕೆಲಸಗಳನ್ನು ನಿಧಾನವಾಗಿ ಪ್ರಾರಂಭಿಸಲಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಪದಗಳನ್ನು ಬಳಸುತ್ತಾ ವಿರೋಧಿಗಳೊಂದಿಗೆ ಕಿತ್ತಾಡಬೇಡಿ. ಪಂಜಾಬ್ನಲ್ಲಿ ಪ್ರಬುದ್ಧ ಸರ್ಕಾರ ಆಡಳಿತದಲ್ಲಿದೆ ಎಂಬ ಸಂದೇಶವನ್ನು ನಾವು ದೇಶಕ್ಕೆ ರವಾನಿಸಬೇಕಿದೆ ಎಂದು ಮಾನ್ ಕಿವಿಮಾತು ಹೇಳಿದ್ದಾರೆ.
ಆಪ್ ನಾಯಕ ಅರವಿಂದ ಕೇಜ್ರಿವಾಲ್, ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಲ್ಲದೆ ಹಳದಿ ಬಣ್ಣದ ಪಗಡಿ ಧರಿಸಿ ಗಮನಸೆಳೆದರು. ಭಗವಂತ ಮಾನ್ 2014 ಮತ್ತು 19ರಲ್ಲಿ ಆಪ್ ಸಂಸದರಾಗಿ ಸಂಗ್ರೂರ್ ಲೋಕಸಭೆಯಿಂದ ಆಯ್ಕೆಯಾಗಿದ್ದು, ಅದಕ್ಕೂ ಮುನ್ನ ಮನ್ಪ್ರೀತ್ ಬಾದಲ್ ನಾಯಕತ್ವದ ಪಿಪಿಪಿ ಪಕ್ಷದಿಂದ 2012ರಲ್ಲಿ ಲೆಹ್ರಾ ವಿಧಾನಸಭೆಯಿಂದ ಸ್ಪರ್ಧಿಸಿ ಸೋತಿದ್ದರು.
ಸಿಬಲ್ಗೆ ಚೌಧರಿ ಗುದ್ದು: ಗಾಂಧಿ ಪರಿವಾರದ ನಾಯಕತ್ವದ ಬಗ್ಗೆ ಕ್ಯಾತೆ ತೆಗೆದಿರುವ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ವಿರುದ್ಧ ಹಿರಿಯ ಮುಖಂಡ ಅಧಿರ್ ರಂಜನ್ ಚೌಧರಿ ಕಿಡಿಕಾರಿದ್ದು, ಸಿಬಲ್ ಯಾವ ಸೀಮೆ ನಾಯಕ ಎಂದೇ ನನಗೆ ಅರ್ಥವಾಗುತ್ತಿಲ್ಲ. ಅವರ ಬೆಂಬಲಕ್ಕಿರುವ ಜನಸಮೂಹದ ಬಗ್ಗೆ ಮಾಹಿತಿಯೇ ಇಲ್ಲ ಎಂದಿದ್ದಾರೆ. ಯುಪಿಎ ಅಧಿಕಾರದಲ್ಲಿದ್ದಾಗ ಸಿಬಲ್ ಎಲ್ಲವೂ ಚೆನ್ನಾಗಿತ್ತು. ಆದರೆ, ಅಧಿಕಾರ ಕಳೆದುಕೊಂಡಿರುವಾಗ ಪಕ್ಷದಲ್ಲಿ ಯಾವುದೇ ಸರಿ ಇಲ್ಲ ಎಂದವರಿಗೆ ಅನಿಸುತ್ತಿದೆ. ಎಸಿ ಕೋಣೆಯೊಂದರಲ್ಲಿ ಕುಳಿತು ಸಂದರ್ಶನ ನೀಡುವುದರಿಂದ ಏನು ಪ್ರಯೋಜನವಿದೆ ಎಂದೇ ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಾವಂತ್, ಬಿರೇನ್ಗೆ ಸಿಎಂ ಸ್ಥಾನ?: ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತಿದ್ದರೂ, ಗೋವಾದಲ್ಲಿ ಪ್ರಮೋದ್ ಸಾವಂತ್ ಮತ್ತು ಮಣಿಪುರದಲ್ಲಿ ಬಿರೇನ್ ಸಿಂಗ್ ಸಿಎಂ ಸ್ಥಾನದಲ್ಲಿ ಮುಂದುವರಿಸುವ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಆದರೆ, ದಿಲ್ಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಇಬ್ಬರೂ ಭೇಟಿ ಮಾಡಿದ್ದು, ಇಬ್ಬರನ್ನೂ ಸಿಎಂ ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆ ಹೈಕಮಾಂಡ್ ತೀರ್ವನಿಸಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಭಗವಂತ ಸಿಂಗ್ ಮಾನ್ ಅವರಿಗೆ ಅಭಿನಂದನೆಗಳು. ಪಂಜಾಬ್ ಕಲ್ಯಾಣ ಮತ್ತು ಪ್ರಗತಿಗಾಗಿ ಒಟ್ಟಾಗಿ ಕೆಲಸ ಮಾಡೋಣ. | ನರೇಂದ್ರ ಮೋದಿ ಪ್ರಧಾನಮಂತ್ರಿ
ಸಿಧು ರಾಜೀನಾಮೆ: ಪಂಜಾಬ್ನಲ್ಲಿ ಕಾಂಗ್ರೆಸ್ ಸೋಲಿನ ಹಿನ್ನೆಲೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ಒಂದು ಸಾಲಿನ ರಾಜೀನಾಮೆ ಪತ್ರವನ್ನು ಹೈಕಮಾಂಡ್ಗೆ ರವಾನೆ ಮಾಡಿದ್ದಾರೆ.
ಜಿ-23 ವಿರುದ್ಧ ಖರ್ಗೆ ಕಿಡಿ: ಕಾಂಗ್ರೆಸ್ನ ಬಂಡಾಯ ನಾಯಕರು ಎಂದೇ ಪರಿಗಣಿಸಲಾಗಿರುವ ಜಿ-23 ಮುಖಂಡರ ವಿರುದ್ಧ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ. ಈ ಗುಂಪು ಪಕ್ಷವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಜಿ-23 ಗುಂಪಿನಲ್ಲಿ ತರೂರ್: ಜಿ-23 ಗುಂಪಿನ ನಾಯಕರ ಜತೆಗೆ ಶಶಿ ತರೂರ್ ಕಾಣಿಸಿಕೊಂಡಿದ್ದಾರೆ. ಗುಲಾಂ ನಬಿ ಆಜಾದ್ ನಿವಾಸದಲ್ಲಿ ಡಿನ್ನರ್ ಮೀಟ್ನಲ್ಲಿ ತರೂರ್ ಪಾಲ್ಗೊಂಡಿದ್ದರು.